ಅಡಕ್ಕೆ ಕೊಯಿಲಿನ ಒಂದು ದಿನ…

ಅಡಕ್ಕೆ-ಕೊಯಿಲಿನ-ಒಂದು-ದಿನ.

ಉದಿಯಪ್ಪಗ, ಗಂಟೆ ಆರೂ ಕಾಲು ಕಳುದ್ದು. ಆನಿನ್ನೂ ನಿದ್ರಾದೇವಿಯ ವಶಲ್ಲಿಯೇ ಇತ್ತಿದ್ದೆ. ಅರೆವರಕ್ಕು: ಎಲ್ಲಿಂದಲೋ ಆರೋ ಮಾತಾಡ್ತಾಂಗೆ ಕೇಳಿತ್ತು, ಗಮನ ಕೊಟ್ಟಿದಿಲ್ಲೆ. ರಜ್ಜಹೊತ್ತು ಕಳುದಪ್ಪಗ ಸ್ವರ ಹತ್ತರಂದ ಕೇಳಿತ್ತು. ಎಂತ ಬೊಬ್ಬೆ ಇದು ಉದಿ ಉದಿಯಪ್ಪಗ; ಒಂದೈದು ನಿಮಿಷ ನೆಮ್ಮದಿಲಿ ವರಗುಲುದೇ ಬಿಡವನ್ನೇ; ಎನ್ನ ಕರ್ಮ ಹೇಳಿ ಮುಣುಮುಣು ಪರೆಂಚಿಯೊಂಡು ಮಗ್ಗುಲು ಬದಲುಸಿ ವರಗಿದೆ. ವರಕ್ಕು ಹಿಡುದ್ದಷ್ಟೇ, ಮೋರೆಗೆ ಒಂದು ಚೆಂಬು‌ನೀರು ಬಿದ್ದತ್ತು. ಶ್ಯೇ…. ವರಕ್ಕೆಲ್ಲಾ ಹಾಳಾತೂಳಿ ಮುಸುಡಿ ‌ಓರೆ ಮಾಡಿಯೋಂಡು ಎದ್ದೆ. ಎದುರೆ ಅಬ್ಬೆ ಕೋಪಲ್ಲಿ ಎನ್ನ ದುರುಗುಟ್ಟಿಯೊಂಡು ನಿಂದಿದು. ಎಂತಕೆ ನೀರು ಚೇಪಿದ್ದೂಳಿ ಕೇಳುವ ಸಾಹಸ ಮಾಡಿದ್ದಿಲ್ಲೆ; ಅಬ್ಬೆಯ ಕೋಪದ ಮೋರೆ ನೋಡಿಯಪ್ಪಗ, ನಿನ್ನೆ ಇರುಳು ಆದ ಕಟ್ಟಪ್ಪಣೆ ನೆಂಪಾತು; ‘ನಾಳೆಂದ ಅಡಕ್ಕೆ ಕೊಯಿಲು ಸುರು ಬೇಗ ಎದ್ದು ನಿತ್ಯದ ಕೆಲಸ ಎಲ್ಲ ಮುಗುಶಿ ಅಡಕ್ಕೆ ಹೆರ್ಕುಲೆ ಹೋಯೆಕ್ಕೂ, ಅರ್ಥ ಆತಲ್ಲದಾ?’.

ಅಂತೂ ಮೋರೆ ಪೆಚ್ಚು ಮಾಡಿಯೊಂಡು ಹಸೆಂದ ಎದ್ದೆ. ನಿತ್ಯ ಕರ್ಮಂಗಳ ಮುಗುಶಿ, ಉದ್ಯಪ್ಪಗಾಣ ಹೆಜ್ಜೆ ಉಂಬಲೆ ಹೇಳಿ ಹೋವ್ತೆ ಎನಗೆ ಶಾಕ್ ಆತು. ಎಂಗಳಲ್ಲಿ ಹೆಚ್ಚಾಗಿದೇ ಉದ್ಯಪ್ಪಂಗೆ ಹೆಜ್ಜೆ ಮಾಡುದು. ಆದರೆ ಇಂದು ಹೆಜ್ಜೆ ಕಾಣ್ತಿಲ್ಲೆ, ಅದರ ಬದಲಿಂಗೆ ಉಂಡೆ/ಬಾಂಬ್ ಇದ್ದು. ಓಹ್ ಇಂದು ಅಡಕ್ಕೆ ತೆಗವಲೆ ಆಳು ಬಕ್ಕೂ, ಕೆಲಸದವಕ್ಕೆ ತಿಂಡಿ ಚಾಯ ಅಯೆಕ್ಕಿದ. ಉಂಡೆ, ಕೊಟ್ಟಿಗೆ ಮಾಡಿರೆ ಅವಕ್ಕೆ ತಿಂಡಿ ಕೊಡ್ಳೆ ಸುಲಭ. ಹಾಂಗಾದ ಕಾರಣ ಇಂದು ತಿಂಡಿ ಹೇಳಿ ಗ್ರೇಶಿಯೊಂಡು ತಿಂಡಿ ತಿಂದಾತು. ಇಷ್ಟೆಲ್ಲಾ ಅಪ್ಪಗ ಗಂಟೆ ಎಂಟೂವರೆ ಕಳುತ್ತಿದ. ಅಡಕ್ಕೆ ತೆಗವ ಆಳು ಬಂತು. ಅದಕ್ಕೆ ತಿಂಡಿ-ಚಾಯ ಕೊಟ್ಟಾತು. ಅಷ್ಟೊತ್ತಿಂಗೆ ಅಡಕ್ಕೆ ಹೆರ್ಕುಲೆ ಮತ್ತೆರಡು ಕೆಲ್ಸದವು ಬಂದವು.

ಅಡಕ್ಕೆ ಕೊಯಿಲು ಸುರು ಆತು. ವಿಧಿ ಇಲ್ಲದ್ದೆ ಅಡಕ್ಕೆ ಹೆರ್ಕುಲೆ ಹೋದೆ. ಅಡಕ್ಕೆ ತೆಗವ ಆಳು ಸರಸರನೆ ಮರಕ್ಕೆ ಹತ್ತುತ್ತು, ಅಡಕ್ಕೆ ತೆಗದಾಕುತ್ತು. ಅಪ್ಪ ಕಿಲೆಗಳ ಎಲ್ಲ ಬಟ್ಟಿಗೆ ತುಂಬುಸಿ ಕೊಡುಗು. ಒಂದಾಳು ಕಿಲೆ ತುಂಬಿದ ಬಟ್ಟಿಯ ಮನೆಜಾಲಿಂಗೆ ತೆಕ್ಕೊಂಡೋಗಿ ಕಿಲೆಗಳ ಸೊರುಗುಗು. ಆನುದೇ ಮತ್ತೊಂದು ಆಳುದೇ ಅಡಕ್ಕೆ ಹೆರ್ಕುಲೆ ಸುರು ಮಾಡಿದೆಯಾ. ಬೇಗ ಬೇಗ ಹೆರ್ಕೆಕ್ಕು. ಬರೇ ಅಡಕ್ಕೆ ಹೆರ್ಕುಲೆ ಉದಾಸನ ಆವ್ತಿದ. ಅದಕ್ಕೆ ಮಾತಾಡಿಯೊಂಡು ಅಡಕ್ಕೆ ಹೆರ್ಕುವಾಳಿ ಮಾತಾಡುಲೆ ಸುರು ಮಾಡಿದೆ. ಒಂದು ಸತ್ಯ ಗೊಂತಾತು; ಎನಗೆ ತುಳು ಸರಿ ಬತ್ತಿಲ್ಲೆ, ಆಳಿಂಗೆ ಕನ್ನಡ ಸರಿ ಬತ್ತಿಲ್ಲೆ. ಅಂತೂ ಇಬ್ರೂ ಎರಡೂ ಭಾಷೆಯ ಸೇರ್ಸಿ ಪಟ್ಟಾಂಗ ಹೊಡಕ್ಕೊಂಡು ಅಡಕ್ಕೆ ಹೆರ್ಕಿದೆಯಾ.

ರಜ್ಜೊತ್ತಪ್ಪಗ ಮನೆಂದ ಕೂ…ಓ… ಹೇಳಿ ಕೂಕುಳು ಹಾಕಿದ್ದು ಕೇಳಿತ್ತು. ಗಂಟೆ ಹತ್ತಾತು; ಚಾಯಕ್ಕೆ ದಿನಿಗೇಳಿದ್ದೂಳಿ ಅರ್ಥಾತು. ಮನೆಗೋದೆಯಾ. ಆಳುಗೊಕ್ಕೆ ಪುನಃ ತಿಂಡಿ-ಚಾಯ.
ಮನೆಗೆ ಎತ್ತಿದೋಳೇ ಕೈ-ಕಾಲು, ಮೋರೆ ತೊಳದು ಮನೆಒಳ ಹೊಗ್ಗಿದೆ. ಮೊದಾಲು ಫಾನ್ ಸ್ವಿಚ್ ಆನ್ ಮಾಡಿ ಕೂದೆ. ಎನಗೆಂತಾರು ಕುಡಿವಲೆ ಬೇಕಲ್ದ. ಒಗ್ಗರಣೆ ಹಾಕಿದ ತಂಪು ಮಜ್ಜಿಗೆ ನೀರು ಮನೆಒಳಂದ ಬಂತು. ಉಪ್ಪು, ಗಾಂಧಾರಿ ಮೆಣಸಿನ ನುರುದು ಇಂಗು ಹಾಕಿದ ಮಜ್ಜಿಗೆ ನೀರು. ಹೊಟ್ಟೆ ತಂಪಪ್ಪಷ್ಟು ಕುಡುದೆ. ರಜ್ಜೊತ್ತು ಕೂದಿಕ್ಕಿ ಪುನಃ ತೋಟಕ್ಕೆ ಹೋದೆಯಾ. ಅದೇ ಕೆಲಸ; ಅಡಕ್ಕೆ ಹೆರ್ಕಿ ಬಾಲ್ದಿಗೆ ಹಾಕುದು, ಬಾಲ್ದಿ ತುಂಬಿಯಪ್ಪಗ ಗೋಣಿಗೆ ಸೊರುಗುದು.

ಅಡಕ್ಕೆ ಹೆರ್ಕುದು ಹೇಳಿದರೆ ಅಂತೆಯ!? ಸೊಂಟ ಬಗ್ಸಿ ಹೆರ್ಕೆಕ್ಕು. ನುಸಿ ಕಚ್ಚುದರೊಟ್ಟಿಂಗೆ ನೊರೆಂಜಿಗ ಇನ್ನೊಂದೆಡೆಲೀ ಕಚ್ಚುಗು. ಅವ್ವೆಂತೋ ಕಚ್ಚಿಕ್ಕಿ ಹಾರಿ ಹೋವ್ತವು, ಕೆಲವೊಂದರಿ ನಮ್ಮ ಪೆಟ್ಟಿಂಗೆ ಸಿಕ್ಕಿ ಸಾಯ್ತವು. ಆದರೆ ಅವು ಕಚ್ಚಿದ ಜಾಗೆ ತೊರ್ಸುದರಲ್ಲಿ ತಡೆಗೋ? ಕೈಕಾಲು ಮೋರೆಲಿ ಇಡೀಕ ಕೆಂಪುಕೆಂಪು ದಡಿಕ್ಕೆಗೋ. ಕೆಲವೊಂದರಿ ಕಂಬುಳಿಹುಳುವೋ ಇನ್ನೆಂತಾರು ಹುಳು-ಹುಪ್ಪಟೆಗಳ ಮುಟ್ಟಿ ಮೈ-ಕೈ ತೊರ್ಸುಲಾತು. ಇಷ್ಟಾದರೆ ಅಕ್ಕನ್ನೆ ಇದರೊಟ್ಟಿಂಗೆ ಸಾಲದ್ದಕ್ಕೆ ಸೋಗೆಯೋ, ಹಾಳೆಯ ಕೆಳ ಇಪ್ಪ ಹಿಸ್ಕುಗ ಕೈಗೆ ಹಿಡಿವದು, ಕಾಲಿನಡಿಗೆ ಸಿಕ್ಕಿ ಅರೆಚ್ಚಿ ಹೋಪದು; ಥೋಕ್… ಆರಿಂಗಕ್ಕು ಈ ವೈವಾಟು.

Arecanut Trees

ತೋಡಿಂಗೆ, ಕಣಿಗೆ, ಅಡಕ್ಕೆಗುಂಡಿಗೆ ತೆಂಗಿನ ಗುಂಡಿಗೆ ಬಿದ್ದ ಅಡಕ್ಕೆ ಹೆರ್ಕುಲೆ ಉದಾಸನ. ರಜ್ಜ ಹೇಸಿಗೆ ಅಪ್ಪದು. ಕೊಳದ ಎಲೆಗ, ಸೋಗೆ, ಮಡಲು, ಬಜವು ಅದು ಇದು ಹೇಳಿ ಇದ್ದ ಕಸವುಗ ಎಲ್ಲ ಇರ್ತು. ಕೆಲವು ಅಡಕ್ಕೆಗ ಅಂತೂ ಕಸವಿನ ಒಳ ಹೋಗಿ ಸಿಕ್ಕಿ ಹಾಯ್ಕೊಂಡು ಇರ್ತು. ಅದರ ಕೈ ಹಾಕಿ ತೆಗೆಯಡದೋ. ಕೆಲವೊಂದರಿ ಹಾಂಗೆ ಅಡಕ್ಕೆ ಹೆರ್ಕುವಗ ಎಂತಾರು ಹರವದು (ಹಾವು, ತಪಸ್ಸಿ, ಕೊಂಬಚ್ಯೋಳು..) ಕಚ್ಚಿರೆ ಹೇಳಿ ಎಲ್ಲ ಯೋಚನೆಗ ಬತ್ತು. ಆದರೆಂತ ಮಾಡುದು? ಅಡಕ್ಕೆ ಹೆರ್ಕಲೇ ಬೇಕು. ಬರೀ ಗೆನಾ ಹಸಿ ಅಡಕ್ಕೆ ಮಾತ್ರ ಸಿಕ್ಕುದಲ್ಲ ಹೆರ್ಕುಲೆ; ಕೊಳದ ಅಡಕ್ಕೆ, ಮಾಲೆಕಾಯಿ, ಉರುವೆ, ಹುಟ್ಟಿದಡಕ್ಕೆ ಇವೆಲ್ಲವನ್ನೂ ಹೇರ್ಕುಕ್ಕು. ಕೆಲವು ಸಮತಟ್ಟಿನ ಜಾಗೆ ಆದರೆ ಇನ್ನೂ ಕೆಲವು ಗುಡ್ಡೆ. ಹುಲ್ಲಿಲ್ಲದ್ದ ಜಾಗೆಲಿ ಅಡಕ್ಕೆ ಹೆರ್ಕುದು ಸುಲಭ, ಅದೇ ಹುಲ್ಲಿದ್ದರಂತೂ ಕೇಳುದೇ ಬೇಡ. ಹುಲ್ಲಿನೆಡೆಲಿ ಎಲ್ಲ ಅಡಕ್ಕೆ ಕಾಣ. ಸರಿಯಾಗಿ ಕಣ್ಣು ಹಾಯಿಸಿ ನೋಡಿ ಹೆರ್ಕೆಕ್ಕೂ. ಹೆಂಗೋ ಪರಡಿ ಅಡಕ್ಕೆ ಹೆರ್ಕಿ ಅಪ್ಪಗ ಬೆಗರಿ ಚೆಂಡಿಮುದ್ದೆ ಆಗಿರ್ತು ನಾವು.

ಮಧ್ಯಾನ್ಹದ ಕೂಕುಳು ಕೇಳುವವರೆಗೆ ಇದೇ ಕೆಲಸ. ಊಟದ ಹೊತ್ತಾತು. ಕೂಕುಳು ಕೇಳಿತ್ತು, ಮನೆಗೆ ಹೋದೆಯ. ಆಳುಗ ಗೋಣಿಗೆ ತುಂಬುಸಿದ ಅಡಕ್ಕೆಯ ಜಾಲಿಲಿ ಸೊರುಗಿದವು. ಕೈಕಾಲು ತೊಳದು ಊಟಕ್ಕೆ ಹೋದವು. ಆನು ಮಿಂದು ಬಂದು ಊಟಕ್ಕೆ ಕೂದೆ. ಊಟಕ್ಕೆ ಬಗೆ ಚಟ್ನಿ, ಕೊದಿಲು ಮಜ್ಜಿಗೆ. ಊಟ ಮಾಡಿಕ್ಕಿ ಸಣ್ಣದೊಂದು ವರಕ್ಕು. ವರಗಿ ಏಳುವಗ ಗಂಟೆ ಎರಡೂಕಾಲು ಕಳುದತ್ತು. ಗಡಿಬಿಡಿಲೀ ಒಂದು ಗ್ಲಾಸ್ ಚಾಯ ಕುಡುದು ಪುನಃ ಅಡಕ್ಕೆ ಹೆರ್ಕುಲೆ ಹೋಪದು. ಇದರೆಡೆಲಿ ಹಟ್ಟಿ ಕೆಲಸವೂ ಆಯೆಕ್ಕಿದ. ಹೊತ್ತೋಪಗಾಣ ಚಾಯಕ್ಕಾತು ಹೊತ್ತು. ಹಪ್ಪಳದೇ ಚಾಯದೇ. ಗಂಟೆ ಐದು ಕಳಿವಗ ಕೆಲಸದವೆಲ್ಲಾ ಮನೆಗೋದವು.

ಇಷ್ಟೆಲ್ಲಾ ಆಗಿ ಮನೆಗೆ ಬಂದಪ್ಪಗ ಬಚ್ಚಿ ಸಾಕಾಗಿರ್ತು. ರಜ್ಜೊತ್ತು ಸುಮ್ಮನೇ ಕೂದಿಕ್ಕಿ ಮಿಂದು ಬಂದರೆ, ಮತ್ತೆ ಎಂತ ಕೆಲ್ಸವೂ ಮಾಡ್ಳೆ ಎಡಿತ್ತಿಲ್ಲೆ. ಇರುಳು ಊಟವೂ ಬೇಡ ಎಂತವೂ ಬೇಡ, ಒಂದರಿ ಮನುಗಿ ಒರಗಿರೆ ಸಾಕಿತ್ತೂಳಿ ಅನ್ಸುತ್ತು. ಅಂತೂ ಒತ್ತಾಯಕ್ಕೆ ಊಟ ಮಾಡಿ ಹಸೆ ಬಿಡ್ಸಿ ಮನುಗಿದೆ. ಗಟ್ಟಿ ಒರಕ್ಕಿದ; ಮರದಿನ ಉದಿಯಾದ್ದು ಗೊಂತೇ ಆಯ್ದಿಲ್ಲೇ. ಅಬ್ಬೆ ಬಂದು ಎಳ್ಸಿತ್ತು.
ಓ ದೇವರೇ.. ಇಷ್ಟು ಬೇಗ ಉದಿಯಾತ ಹೇಳಿ ಅನ್ಸಿತ್ತು. ರಜ್ಜೋತ್ತು ಕಳುದು ಏಳ್ಸೂಳಿ ಅಬ್ಬೆಯತ್ರ ಹೇಳಿ ಒರಗಿದೆ. ಗಂಟೆ ಎಂಟಪ್ಪಲಾತು. ಏಳ್ಸಿದವು; ಇನ್ನೆಂತ ಮಾಡುದು. ಹಸೆ ಮಡ್ಸಲೇ ಬೇಕು. ಆನಿನ್ನು ಏಳ್ತೆ, ಅಡಕ್ಕೆ ಹೆರ್ಕುಲೆ ಬಾಕಿದ್ದಿದಾ… ಮತ್ತೆ ಚಾಯಕ್ಕೆ ಅಪ್ಪಗ ಕಾಂಬೊ…… ಆಗ…

LEAVE A REPLY

Please enter your comment!
Please enter your name here