ಬಾಲ್ಯದ ಹೊಡೇಂಗೆ ಒಂದು ವಿಹಾರ

ಬಾಲ್ಯದ ಹೊಡೇಂಗೆ ಒಂದು ವಿಹಾರ

ಆನು ಮನೆ ಹತ್ರ ಇಪ್ಪ ಕುಳಾಲು ಸರಕಾರಿ ಶಾಲೆಲಿ ಕನ್ನಡ ಮೀಡಿಯಂಲಿ ಏಳನೇವರೆಗೆ ಕಲ್ತದು. ಅಂಬಗಾಣ ವಿಷಯಂಗ ನೆಂಪಪ್ಪಗ ಈಗ ಖುಷಿ ಆವ್ತು. ಅಂಗನವಾಡಿಂದ ನಾಲ್ಕನೇ ಕ್ಲಾಸಿನವರೆಗೆ ಅಕ್ಕನೊಟ್ಟಿಂಗೆ ಶಾಲೆಗೆ ನಡಕ್ಕೊಂಡು ಹೋದ್ದದು. ಅಷ್ಟಪ್ಪಗ ಆನು ಮನೇಲಿ ಎಲ್ಲರಿಂದ ಸಣ್ಣ ಅನ್ನೆ. ಎಲ್ಲೋರುದೇ ಕೊಂಡಾಟ ಮಾಡುಗು. ಹಾಂಗೆ ರಜ್ಜ ಹಠ, ಉಪದ್ರ ಮಾಡುದುದೇ ಜಾಸ್ತಿ. ಬೈಗಳು ಪೆಟ್ಟುದೇ ಎನಗೇ ಜಾಸ್ತಿ. ಮದಲೇ ಶಾಲೆಗೆ ಹೋಪಲೆ ಉದಾಸನ.

ಆದರೂ ಅಕ್ಕನೊಟ್ಟಿಂಗೆ ಹೋಪ ಕಾರಣ ಹೋಗ್ಯೊಂಡಿತ್ತಿದ್ದೆ. ಅಕ್ಕ ದೊಡ್ಡ ಹೇಳಿ ಅದು ಎನ್ನ ಬೈವದು, ಹಾಂಗೆ ಹೀಂಗೆ ಹೇಳಿ ಚೊರೆ ಮಾಡುದು ಯಾವಾಗಳೂ. ಶಾಲೆಗೆ ಬೇಗ ಹೆರಡದ್ದರೆ ಮನೆ ಗೇಟಿಂದ ಶಾಲೆಗೊರೆಗುದೇ ಕಂಜಿ ಎಬ್ಬಿದ ಹಾಂಗೆ ಎಬ್ಬುದು. ಅದರ ಫ್ರೆಂಡಿನ ಒಟ್ಟಿಂಗೆ ದೊಡ್ಡ ಜನ ಆಯ್ಕೊಂಡು ಎನ್ನ ಬೈಕೊಂಡು ನೂಕಿಕೊಂಡೆ ಹೋಪದು. ಎನಗೆ ಬೇರೆ ದಾರಿ ಇಲ್ಲೆನ್ನೆ. ಎಂತಾದರು ಅದರೊಟ್ಟಿಂಗೆಯೇ ಹೋಯೆಕ್ಕು. ಮತ್ತೆ ಮಧ್ಯಾಹ್ನ ಬುತ್ತಿಗೆ ಹೇಳಿ ಪುನಃ ಅದರ ಕ್ಲಾಸಿಂಗೇ ಹೊಯ್ಕು. ಒಂದೊಂದರಿ ಅದುವೇ ಬಾಯಿಗೂ ಹಾಕುಗು ತಿನ್ಸುಗು. ಒಬ್ಬನೇ ತಂಗೆನ್ನೆ, ಸಣ್ಣನ್ನೆ. ಹಾಂಗೆ ಹೊತ್ತೋಪಗ ಪುನಃ ಮನೆಗೆ ಹೋಪಗ ಮಳೆಗಾಲಲ್ಲಿ ಒಂದೊಂದರಿ ಮಳೆಬಾರದ್ರೆ ಅಕ್ಕನ ಕೆಲವು ಫ್ರೆಂಡುಗಳು, ಎನ್ನ ಫ್ರೆಂಡುಗಳು ಎಲ್ಲೋರುದೇ ಕುಂಟಲ ಹಣ್ಣು, ಕರಂಡೆ ಇತ್ಯಾದಿ ಹಣ್ಣೆಲ್ಲ ತಿಂದುಕೊಂಡು ಗುಡ್ಡೆಲಿ ಎಲ್ಯಾರು ಬಣ್ಣ ಬಣ್ಣದ ಕೊಡೆಯ ಬಾಕಿ ಮಾಡಿಕ್ಕಿ ಬಪ್ಪದು.

ಕುಂಟಲ ಹಣ್ಣು ತಿಂದರೆ ನಾಲಗೆ ಪೂರ ನೀಲಿ ಆಗಿರ್ತು. ಜಾಸ್ತಿ ತಿಂದರೆ ಶೀತಜ್ವರ ಆವ್ತು ಹೇಳಿ ಕುಂಟಲ ತಿಂದರೆ ಮನೆಯೋರು ಬೈಗು ಹಂಗಾಗಿ ತಿಂದ ಮತ್ತೆ ಗೇರುಬೀಜದ ಎಲೆ ತಿಂಬದು ಅಷ್ಟಪ್ಪಗ ನೀಲಿಬಣ್ಣ ಹೋವ್ತು, ಇಲ್ಲದ್ದರೆ ಕರಂಡೆ ಕಾಯಿ ತಿಂದರೂ ನೀಲಿ ಬಣ್ಣ ಹೋಕ್ಕು, ಹಾಂಗೆ ಬೈಗಳಿಂದ ತಪ್ಪಿಸಿಕೊಂಬ ಉಪಾಯ. ಆದರೆ ಗುಡ್ಡೆಲಿ ಬಾಕಿ ಮಾಡಿದ ಕೊಡೆ ಇದ್ದನ್ನೇ! ಅದಕ್ಕೆ ಬೈಗಳು ತಿಂದು ವಾಪಾಸು ಗುಡ್ಡೆಲಿಡಿ ಹುಡುಕಿ ಯಾವುದಾರೂ ಮರಕ್ಕೆ ನೇತಾಡ್ಸಿದ ಕೊಡೆಯ ತಪ್ಪದು. ಹಾಂಗೆ 4.30ಗೆ ಶಾಲೆ ಬಿಟ್ಟರು ಕಾಲುಗಂಟೆ ದಾರಿ ಆದರೂ ಎಂಗ ಮನೆಗೆ ಎತ್ತುವಾಗ 5.30. ಒಂದರಿ ದಾರಿಲಿ ಒಂದು ದನ ಎಂಗಳೆಲ್ಲಾ ಅಟ್ಟಿಸಿಕೊಂಡು ಬಂದು ಅಬ್ಬಾ!! ಆ ದಿನ ಓಡಿದ್ದೇ ಓಡಿದ್ದು ಎಲ್ಲರುದೇ, 4.40 ಕ್ಕೆ ಮನೆಗೆ ಎತ್ತಿ ಆಯಿದು. ಮತ್ತೆ ದಾರಿಲಿ ಮಂಗಂಗಳ ಉಪದ್ರವೂ ಇದ್ದತ್ತು. ಅಷ್ಟಪ್ಪಗಳೂ ಹೆದರಿ ಓಡಿಕೊಂಡು ಇತ್ತದೆಲ್ಲ ನೆನಪು ಮಾಡಿದರೆ ಈಗ ಭಾರಿ ಮಜಾ.

ಒಂದರಿ ರಜೆಲಿ ಮನೆಲಿ ಹೊೖಗೆ ಗಾಳಿಸಿ ರಾಶಿ ಹಾಕಿತ್ತದರಲ್ಲಿ ಕರಟ ಮಡಿಗಿ ಇಡ್ಲಿ, ಉಂಡೆ ಎಲ್ಲಾ ಮಾಡಿ ಆಡಿಕೊಂಡು ಇಪ್ಪಗ ಅಪ್ಪ ಬೈದವೂಳಿ ತೋಟಕ್ಕೆ ಓಡಿ ಮುಸ್ಸಂಜೆಯಾದರೂ ಆನು ಮನೆಗೆ ಬೈಂದೇ ಇಲ್ಲೆ. ಬೈತ್ತವೂಳಿ ಹೆದರಿ ಬಾಳೆ ಸಸಿ ಎಡೆಲಿ ಕೂದಿತ್ತೆ!!. ಅಮ್ಮ, ಅಪ್ಪ,ಅಕ್ಕ ಎಲ್ಲರೂ ಹೆದರಿ ‘ಎಲ್ಲಿಗೋತಪ್ಪಾ ಈ ಕೂಸು’ ಹೇಳಿ ಜೋರು ದೆನಿಗೇಳಿಕೊಂಡು ತೋಟಲ್ಲಿ ಇಡೀ, ಕೆರೆಲಿ, ಬಾವಿಲಿ ಪೂರಾ ಹುಡುಕಿದವು. ಅವು ದೆನಿಗೇಳುದು ಎನಗೆ ಗೊಂತಾದರೂ ಸುಮ್ಮನೆ ಕೂದಿತ್ತೆ. ಆದರೂ ಹೆಂಗೋ ಅಕ್ಕಂಗೆ ಕಂಡತ್ತು . ಹಾಂಗೆ ಸಿಕ್ಕಿಬಿದ್ದಪ್ಪಗ ಹೆದರಿ ಬೆಗರಿ ಹಣ್ಣು ಹಣ್ಣು ಆನು. ಪುಣ್ಯಕ್ಕೆ ಎಂಥದೂ ಬೈಯ್ಯದ್ದೆ ಸಮಾಧಾನಲ್ಲಿ ಹೇಳಿ ಮನೆಗೆ ಕರಕ್ಕೊಂಡು ಹೋದವು. ಮತ್ತೆ ಎನ್ನ ಅಕ್ಕನ ಸಾಹಸಂಗಳೂ ಸುಮಾರಿದ್ದು. ಹಲ್ಲು ತಿಕ್ಕುದು ಹೇಳಿರೆ ಆಗ ಅದಕ್ಕೆ. ಎಷ್ಟು ಹಠ ಹೇಳಿದರೆ ಹಲ್ಲು ತಿಕ್ಸಿದ ಕೂಡಲೇ ಹೋಗಿ ಹಲ್ಲಿಂಗೆಲ್ಲಾ ಮಣ್ಣು ಉದ್ದಿಕೊಂಡು ಬಕ್ಕು. ಮತ್ತೆ ಕಾಲಿಗೆ ಗೆಜ್ಜೆ ಹಾಕಿದ್ದಕ್ಕೆ ಗೆಜ್ಜೆಯ ಒಲೆಗೆ ಹಾಕಿದ ಜೆನ ಎನ್ನಕ್ಕ. ಒಂದೆರಡು ಸರ್ತಿ ಎನ್ನ ಅಕ್ಕಂಗೆ ಎನ್ನ ಬಗ್ಗೆ ” ನನ್ನ ತಂಗಿ ಸ್ಮಿತಾ, ಅವಳು ಬಹಳ ಚೂಟಿ। ಮಾಡುತಾಳೆ ಲೂಟಿ, ಓಡುತಾಳೆ ಅತ್ತು.।।” ಹೇಳಿ ಪದ್ಯ ಬರದು ಬಹುಮಾನ ಎಲ್ಲಾ ಸಿಕ್ಕಿದ್ದಡಪ್ಪಾ.

ಮತ್ತೆ ಸಣ್ಣಾದಿಪ್ಪಗ ಆಡಿಕೊಂಡಿದ್ದ ಆಟಂಗ ಕೆರೆ- ದಡ, ಹುಲಿ- ದನ, ಜಿಬಿಲಿ, ಡೊಂಕ, ಕಣ್ಣಾಮುಚ್ಚೆ, ಮರಕೋತಿಯಾಟ, ಲಗೋರಿ, ಬಿಸ್ಕೆಟ್ ಬಿಸ್ಕೆಟ್, ಚೆನ್ನೆಮಣೆ, ಅವಲಕ್ಕಿ- ದವಲಕ್ಕಿ, ದೇವರಕೋಣೆ- ಅಡಿಗೆಕೋಣೆ, ಹಿಂಗೇ ಇನ್ನೂ ಸುಮಾರಿದ್ದು. ಒಟ್ಟಾರೆ ಗಮ್ಮತ್ತು ಹೇಳಿರೆ ಗಮ್ಮತ್ತು. ರಜೆಲಿ ಆನುದೇ ಅತ್ತಿಗೆದೆ ಸೇರಿ ಎಂಗಳ ಎರಡು ನಾಯಿಗೊಕ್ಕೆ ಮದ್ವೆ ಮಾಡ್ಸಿದ್ದು, ಅಡಿಗೆ ಆಟ ಆಡುದು, ಪುಳ್ಯಕ್ಕೆಲ್ಲ ಸೇರಿ ಕ್ರಿಕೆಟ್, ಲಗೋರಿ ಎಲ್ಲಾ ಆಡುದು ಮತ್ತೆ ಅಡಕ್ಕೆ ಹಾಳೆಲಿ ಕೂದು ಸೋಗೆ ಹಿಡುದು ಎಳಕ್ಕೊಂಡು ಜಾಲಿಡೀ ಹೋಪದು. ಅಡಿಗೆ ಆಟ ಆಡುದುಳಿ ಮನೆ ಒಳ ಇಪ್ಪ ಪಾತ್ರಂಗ ಪೂರ ಹೆರ ಜಾಲಿಲಿ. ಅಮ್ಮಂಗೆ ಅಡಿಗೆಗೂ ಪಾತ್ರಂಗ ಸಿಕ್ಕದ ಹಾಂಗೆ ಮಾಡಿ ಬೈಗಳು ತಿಂಬದು. ಎಲ್ಲರನ್ನೂ ಸೇರಿಸಿ ಅಂಗಡಿ ಹಾಕಿ ವ್ಯಾಪಾರ ಮಾಡುವ ಆಟ, ಬ್ಯಾಂಕಿಲಿ ಕೆಲಸಲ್ಲಿ ಇಪ್ಪೋರ ಹಾಂಗೆ ಮ್ಯಾನೇಜರ್ನ ಹಾಂಗೆಲ್ಲಾ ಮಾಡಿಕೊಂಡು ಸ್ಟೈಲ್ ಮಾಡಿಕೊಂಡು ಹೋಪದು, ಸೀರೆ ಸುತ್ತಿ ಟೀಚರ್ ಆಟ, ಈ ಎಲ್ಲಾ ಆಟಲ್ಲಿಯೂ ಮನೆಯವಕ್ಕೆಲ್ಲಾ ಉಪದ್ರ ಮಾಡದ್ರೆ ವರಕ್ಕೂ ಬಾರ. ಇಸ್ಪೀಟು, ಲೂಡೋ, ಹಾವೇಣಿ, ಕೇರಂ, ಚದುರಂಗ ಇತ್ಯಾದಿ ಹೊಸ ಆಟಂಗಳೂ ಇದ್ದತ್ತು.

ಒಟ್ಟಾರೆ ಈಗಾಣ ಕಾಲಲ್ಲಿ ಎಂಗೊಗೆ ಇಷ್ಟೆಲ್ಲಾ ಗಮ್ಮತ್ತಿನ ಬಾಲ್ಯ ಸಿಕ್ಕಿದ್ದು ಹೇಳಿರೆ ತುಂಬಾ ಖುಷಿ ಆವ್ತು. ಮತ್ತೆ ಹೈಸ್ಕೂಲ್ ಪಿಯುಸಿ ಡಿಗ್ರಿ ಹೇಳಿ ಪೇಟೆಲಿ ಕಾಲೇಜಿಗೆ ಬಂದಪ್ಪಗ ಇದೆಲ್ಲವೂ ಬಿಟ್ಟು ಹೋತು. ಆದರೆ ಮತ್ತಾಣ ಅನುಭವವೂ ವಿಭಿನ್ನ ಅದುದೇ ಇನ್ನೊಂದು ತರಹ ಗಮ್ಮತ್ತು. ಈಗ ಎಂಗೆಲ್ಲಾ ನೋಡಿಕೊಂಡು ಇದ್ದ ಹಾಂಗೆಯೇ ಎಲ್ಲವೂ ಬದಲಾವ್ತಾ ಇದ್ದು, ಬದಲಾವಣೆ ಸಹಜ ಮತ್ತೆ ಶಾಶ್ವತ. ಅದರ ನಾವು ಒಪ್ಪಿಕೊಳ್ಳೆಕ್ಕಾದ್ದೇ ಇಪ್ಪದು. ಈಗಿನ ಕಾಲಕ್ಕೆ ತಕ್ಕಹಾಂಗೆ ಟಿವಿ, ಮೊಬೈಲ್, ಕಂಪ್ಯೂಟರ್, ಇಂಟರ್ನೆಟ್ ಇದರಲ್ಲಿಯೇ ಕಾಲ ಕಳೆತ್ತು. ಶಿಕ್ಷಣ, ಕೆಲಸ ಹೇಳಿ ನಮಗೆ ಪೇಟೆಯ ಬಸ್ಸು ಸಿಕ್ಕುದು, ಹೋಪದು ಸಹಜ, ಸುಲಭ. ಆದರೆ ವಾಪಾಸು ಬಪ್ಪಲೆ ಎನಗೆ ಊರಿನ ಬಸ್ಸೇ ಸಿಕ್ಕಿದ್ದಿಲ್ಲೆ ಹೇಳಿ ಅಪ್ಪಲಾಗ ಅಷ್ಟೇ. ಊರಿನ ಬಸ್ಸು ಇದ್ದು ಹೇಳಿಯೂ ನೆಂಪಿದ್ದರಾತು. ಹಳ್ಳಿ ಮನೆಂದಲೇ ಬಂದರು ಹೊಸ ಪ್ರಪಂಚಕ್ಕೆ ಹೊಂದಿಕೊಳ್ಳಕ್ಕಾದರೆ ಎಲ್ಲವನ್ನು ಒಪ್ಪಿಕೊಳ್ಳಕ್ಕು, ಒಟ್ಟಿಂಗೆ ನಾವು ಬಂದ ದಾರಿಯೂ ನೆಂಪಿರಲಿ. ಹಾಂಗೆ ಈಗ ಇಪ್ಪ ಎಲ್ಲಾ ವಿಷಯಂಗಳೂ ಈಗಾಣ ಮಟ್ಟಿಗೆ ತುಂಬಾ ಸೌಕರ್ಯ, ಖುಷಿ ಕೊಡ್ತು. ಈಗ ಪ್ರೌಢತೆ ಬಂದು ಸರಿ-ತಪ್ಪು ಯಾವುದು ಎಲ್ಲಾ ಅರ್ಥ ಆವ್ತು. ಬದಲಾವಣೆಗೆ ನಾವುದೇ ಒಂದಾಯೆಕ್ಕು. ಎಷ್ಟಾದರೂ ಅಂದ್ರಾಣದ್ದು ಅಂದಿಂಗೆ, ಇಂದ್ರಾಣ ಖುಷಿ ಇಂದಿಂಗೆ. ಎಲ್ಲವೂ ಆಯಾಯ ಕಾಲಕ್ಕೆ ಖುಷಿ ಕೊಡ್ತು. ಮೊದಲಣದ್ದೇ ಬೇಕು ಹೇಳಿ ಬಾವಿಯ ಒಳಣ ಕಪ್ಪೆ ಹಾಂಗೆ ಕೂಪಲೆ ಆವ್ತಿಲ್ಲೆ.

“ಹಳೆ ಬೇರು ಹೊಸ ಚಿಗುರು ಕೂಡಿರಲು ಮರ ಸೊಬಗು” ಹೇಳಿದ ಹಾಂಗೆ ಹಳೆ ಬಾಲ್ಯದ ನೆನಪು, ಹೊಸ ಪ್ರಪಂಚದ ಬದಲಾವಣೆಗ ಎಲ್ಲಾ ಸೇರಿದರೆ ಜೀವನ ಲಾಯ್ಕ.

LEAVE A REPLY

Please enter your comment!
Please enter your name here