ಭ್ರಮೆಯೋ? ಅಥವಾ…….

ಭ್ರಮೆಯೋ

ಇದು ಸುಮಾರು ಎಂಟರಿಂದ ಒಂಭತ್ತು ವರ್ಷ ಹಿಂದೆ ನಡದ ಘಟನೆ. ಬರೀ ಒಂದು ಘಟನೆ ಹೇಳಿ ಹೇಳುದರಿಂದ ಹೆಚ್ಚಿಗೆ ಎನಗೊಂದು ಮರೆಯಾದ್ದಂಗೆ ಪಾಠ ಕಲ್ಶಿದ ಸನ್ನಿವೇಶ ಹೇಳಿ ಗ್ರೇಶುತ್ತೆ.
ಎಂಗಳ ಊರಿಲಿ ಒಂದು ಮಣ್ಣಿನ ಮಾರ್ಗ ಇದ್ದು. ಆ ಮಾರ್ಗಲ್ಲಿ ಹೋಪಗ ಒಂದು ಕಾಡಿನ ಹಾಂಗೆ ಇಪ್ಪ ಸಣ್ಣ ಜಾಗೆ ಸಿಕ್ಕುತ್ತು. ಮಾರ್ಗದ ಒಂದು ಹೊಡೆ ಗುಡ್ಡೆ ಆದರೆ ಇನ್ನೊಂದ್ ಹೊಡೆ ಪ್ರಪಾತದ ಹಾಂಗಿದ್ದ ಜಾಗೆ. ಆ ಪ್ರಪಾತಲ್ಲಿ ಒಂದು ಸಣ್ಣ ಕಾಡು. ಮಟಮಟ ಮಧ್ಯಾಹ್ನ, ಮೂರ್ಸಂಧ್ಯದ ಹೊತ್ತಿಂಗೆ, ಹೊತ್ತಡಗಿದ ಮೇಲೆ ಆ ಜಾಗೆಲಿ ಆಗಿ ಜನಂಗ ಒಬ್ಬೊಬ್ಬನೇ‌ ನಡಕ್ಕೊಂಡು ಅಥವಾ ಸಣ್ಣ ಮಕ್ಕಳ ಕರಕ್ಕೊಂಡ್ ಹೋಗವು. ಮನೆಯ ಹಿರಿತಲೆಗಳ ಹತ್ರೆ ಈ ಜಾಗೆಯ ಬಗ್ಗೆ ಕೇಳಿರೆ, ಮೊದಲಿಂದಲೇ ಹೆಣಂಗಳ ಹೊತ್ತುಸಿಗೊಂಡು ಇದ್ದ ಜಾಗೆ ಅದು ಹೇಳಿ ಹೇಳ್ತವು. ಮುದ್ಕರಾಗಿಯೋ, ಆಗದ್ದೆಯೋ ಅಥವಾ ಅಚಾನಕ್ ಆಗಿ ಸತ್ತೋರ ಹೆಣವ ಅಲ್ಲಿ ಹೊತ್ತುಸುಗುಡ. ಹಿಂದಾಣ ಕಾಲಲ್ಲಿ ತಿಂಗಳಗಾದ್ದೆ ಹುಟ್ಟಿದ ಮಕ್ಕಳ ಆಸ್ಪತ್ರೆಗೆ ಎಲ್ಲ ಕರಕ್ಕೊಂಡು ಹೋಗವು, ಸತ್ತ ಮಕ್ಕಳ ಎಲ್ಲ ಅಲ್ಲೇ ಆ ಕಾಡಿಲಿ ಹುಗಿಗಡ್ಡ. ಆ ಜಾಗೆಲಿ ಸುಟ್ಟೋರ, ಹುಗುದೋರ ಅತೃಪ್ತ ಆತ್ಮಂಗ ತಿರ್ಗುತ್ತವ್ , ದಾರೀಲಿ ಹೋಪೋರ ಹೆದರುಸುತ್ತವು ಹೇಳಿ ಹೇಳ್ತವು. ಊರಿನೋರ ಕೇಳಿದರೂ ಅವುದೇ ಹೇಳುದು ಹೀಂಗೆಯೇ. ಕೆಲವು ಜನಂಗ “ಎಂಗ ಹೊಯ್ಕೊಂಡಿಪ್ಪಾಗ ಎಂಗಳ ಓಡಿಸಿಯೊಂಡ್ ಆರೋ ಬಂದವು, ಕಿರ್ಚುವ ಶಬ್ದ ಕೇಳಿದ್ದು , ಮಾತಾಡುವ ಶಬ್ದ ಕೇಳಿದ್ದು” ಹೀಂಗೇ ಎಂತಾರು ಹೇಳ್ತವು. ಈಗಳುದೇ ಹೊತ್ತಡಗಿದ ಮೇಲೆ ಒಬ್ಬನೇ ನಡಕ್ಕೊಂಡ್ ಹೋಪಲೆ, ಮಕ್ಕಳ ಆ ದಾರಿಲಿ ಹೋಪಲೆ ಬಿಡ್ಳೆ ಜನಂಗ ಹೆದರುತ್ತವು.

ಸಣ್ಣಾಗಿಪ್ಪಗಿಂದ ಈ ಕಥೆಯ ಕೇಳಿತ್ತಿದ್ದೆ, ಆದರೆ ಒಂದು ದಿನವೂ ಅದು ನಿಜವೋ ಅಲ್ಲದೋ ಹೇಳಿ ನೋಡುವ ಅವಕಾಶ, ಧೈರ್ಯ ಎರಡೂ ಇತ್ತಿಲ್ಲೆ. ಆನು ಹೈಸ್ಕೂಲಿಲಿ ಕಲಿತ್ತಾ ಇದ್ದ ಸಮಯ. ಒಂದು ದಿನ….. ಮಳೆಗಾಲ ಬೇರೆ…ಶಾಲೆಂದ ಎಂಗಳ ಮನೆಗೆ ಬೇಗ ಬಿಟ್ಟರೂ, ಗಾಳಿ ಮಳೆ ಜೋರಿದ್ದ ಕಾರಣ ಅರ್ಧ ದಾರೀಲಿ ನಿಲ್ಲೆಕ್ಕಾಗಿ ಬಂತು. ಮನೆಗೋಪಲೆ ತಡವಾತು.‌ಮನೆಗೋಪಲೆ ಬೇರೊಂದು ತೋಟದ ಅಡ್ದದಾರಿ ಇದ್ದರೂ, ಅದೇ ಮಣ್ಣಿನ ಮಾರ್ಗಲ್ಲೀ ಹೆರಟೆ. ಒಂದು ಭಂಡ ಧೈರ್ಯ, ಎಂತಾವ್ತು , ಎಂತ ಇದ್ದು ಅಲ್ಲಿ ಹೇಳಿ ನೋಡುವ ವಯೋಸಹಜ ಕುತೂಹಲ. ನಿಜಕ್ಕೂ ಅಲ್ಲಿ ಅತೃಪ್ತ ಆತ್ಮಂಗ ಸಿಕ್ಕುತ್ತ…!? ಹೆದರ್ಸುತ್ತವಾ? ಊರಿನವು ಹೇಳುದು ಸತ್ಯವೋ, ಅಲ್ಲದೋ ಹೇಳಿ ನೋಡ್ವಾಳಿ ಅದೇ ದಾರೀಲಿ ಹೆರಟೆ. ಕಾಡಿನ ಹಾಂಗಿದ್ದ ಜಾಗೆ ಬಂತು.‌ ಅಲ್ಲಿಂದ ಮನೆಗೊಂದು ಅಲ್ಲಿಂದಲ್ಲಿಗೆ ಅರ್ಧ ಕಿಲೋಮೀಟರ್ ಇಕ್ಕಷ್ಟೇ. ಮನಸ್ಸಿನ ಒಂದು ಮೂಲೆಲಿ ಪೊಟ್ಟು ಧೈರ್ಯ, ಅದೇ ಇನ್ನೊಂದ್ ಮೂಲೇಲಿ ಎಲ್ಯಾದರ್ ನಿಜಕ್ಕುದೇ ಯಾವ್ದಾರು ಪ್ರೇತವೋ ಸಿಕ್ಕಿರೆ, ಹೆದರ್ಸಿರೆ ಎಂತ ಮಾಡುದು…!? ಹೀಂಗೆ ಎಂತೆಂತೋ ಯೋಚನೆಗ ಸುಳುಕ್ಕೊಂಡು ಇತ್ತು.

ಇದರೊಟ್ಟಿಂಗೆ ಮಳೆ,ಗಾಳಿ. ಮಾರ್ಗದ ಎರಡೂ ಹೊಡೆಲಿ ದೊಡ್ಡ ದೊಡ್ಡ ಮರಂಗ, ಒಟ್ಟಿಂಗೆ ಕಸ್ತಲೆ ಅಪ್ಪಲೆ ಬೇರೆ ಸುರು ಆಯ್ದೂ. ಆದ್ದಾಗಲಿ ಹೇಳಿಯೊಂಡ್ ಮುಂದೆ ನಡದೆ. ಅದೇ ಹೊತ್ತಿಂಗೆ ಮಿಂಚು ಬರೆಕ್ಕೊ? ರಜ್ಜ ಹೆದರಿಕೆ ಅಪ್ಪಲೆ ಸುರು ಆತು. ಎಂತ ಆಗ ದೇವರಿದ್ದ ಹೇಳಿ ಗ್ರೇಷಿಯೊಂಡು ರಾಮ ರಾಮ ಹೇಳಿ ಮನಸಿಲೇ ಗುಣುಗುಟ್ಟಿಯೊಂಡು ಮುಂದೆ ಹೆಜ್ಜೆ ಮಡುಗಿದೆ. ಅದೇ ಹೊತ್ತಿಂಗೆ ಎಂತೆಂತೊ ಶಬ್ದ ಕೇಳಿದಾಂಗಾತು. ಹೆದರಿಯಪ್ಪಗ ಪಂಚೇಂದ್ರಿಯಂಗ ಅಲರ್ಟ್ ಆವ್ತಡ್ಡ. ಗಾಳಿ ಜೋರು ಬೀಸುಲೆ ಸುರು ಆತು. ಆರೋ ಹಿಂದಂದ ಬಂದ ಹಾಂಗೆ ಅನ್ಸಿತ್ತು. ಹಿಂದೆ ತಿರುಗಿ ನೋಡಿದೆ, ಆರುದೆ ಕಂಡಿದವಿಲ್ಲೆ. ಮತ್ತುದೆ ಬೀಸ ನಡವಲೆ ಸುರು ಮಾಡಿದೆ. ಕಳ್ಕುದು ಹೇಳ್ತವಲ್ಲ ಹಾಂಗೆ ಶಬ್ದಂಗ ಕೇಳಿತ್ತು. ಒಂದು ಸರ್ತಿ ಅಲ್ಲ, ಎರಡು-ಮೂರು ಸರ್ತಿ ಕೇಳಿತ್ತು. ಈಗ ನಿಜಕ್ಕೂ ತುಂಬಾ ಹೆದರಿಕೆ ಆತು. ಹೆದರಿ ಎದೆದೆ ಜೋರು ಬಡಿವಲೆ, ಆ ಜಡಿಮಳೆಯ ಎಡೆಲಿದೆ ಮೈ ಇಡೀ ನಡುಗಿ ಬೆಗರುಲೆ ಸುರು ಆತು. ಜೋರು ಬೀಸುವ ಗಾಳಿ, ಇರಿಂಟಿಗಳ ಶಬ್ದ ಒಂದು ಹೊಡೆಲಿ ಆದರೆ ಇನ್ನೊಂದೆಡೆಲಿ ಜೋರು ಗುಡುಗು. ಒಟ್ಟಿಂಗೆ ಮಿಂಚುದೆ ಕಾಣ್ತು. ಗಾಳಿಯ ಭರಕ್ಕೆ ಮರಂಗ ಬೀಳ್ತೋ ಹೇಳಿ ಅನ್ಸಿತ್ತು. ಒಂದೆರಡು ದೊಡ್ಡ ಮರಂಗಳ ಗೆಲ್ಲುಗ ಮುರುದು ಧಡೊಲ್ಲೋಳಿ ಬಿದ್ದ ಶಬ್ದವೂ ಕೇಳಿತ್ತು. ಈ ಶಬ್ದ ಕೆಮಿಗೆ ಬಿದ್ದದೇ ತಡವು ಹೆದರಿ ಪೆರ್ಜೀವ ಆಗಿ ಓಡುಲೆ ಸುರು ಮಾಡಿದ ಜನ ಆನು ಮನೆಯ ಗೇಟಿನ ಹತ್ರವೇ ಬಂದು ನಿಂದದು. ಹಿಂದೆಯೂ ತಿರ್ಗಿದ್ದಿಲ್ಲೆ, ದಾರಿಯನ್ನೂ ಸರಿ ನೋಡಿದ್ದಿಲೆ…ಅಂತೂ ಮನೆಗೆ ಮುಟ್ಟಿದೆ. ಮನೆಗೆ ಬಂದಪ್ಪಗ ಎನ್ನ ಅವಸ್ಥೆ ನೋಡಿ ಬೈಗಳಿನ ಸುರಿಮಳೆ… ಎಂತಕೆ ಇಷ್ಟೊತ್ತು ಮನೆಗೆ ಬಪ್ಪಲೆ ಹೇಳಿ; ಗಾಳಿ ಮಳೆ ಇದ್ದ ಕಾರಣ ಅರ್ಧದಾರಿಲಿ ನಿಂದು ಬಂದದು ಹೇಳಿ ಮನೆಯವರ ಕೈಂದ ಮತ್ತುದೇ ಸಿಕ್ಕುವ ಬೈಗಳಿನ ತಪ್ಪುಸಿ ಆತು. ಆದರೆ ನಿಜಕ್ಕೂ ಅದ ಹೆದರಿಕೆ….!‌ ಅದರ ಹೇಂಗೆ ಕಮ್ಮಿ ಮಾಡುದು..? ಮನೆಲಿ ಹೇಳಿತ್ತೋ..!? ಮತ್ತೂ ಎರಡು ಬೈಗಳು ಹೆಚ್ಚು ಸಿಕ್ಕುಗು; ಅಧಿಕಪ್ರಸಂಗ ಮಾಡಿದ್ದು ಎಂತಕೇಳಿ. ಹಾಂಗಾಗಿ ಆರಿಂಗೂ ಹೇಳದ್ದೆ ಸುಮ್ಮನೆ ಎಂತೂ ಗೊಂತಿಲ್ಲದ್ದ ಬೆಪ್ಪಂಗಳ ಹಾಂಗೆ ಕೂದೆ.

ಎನಗೆ ಯಾವ ಪ್ರೇತವುದೆ ಕಣ್ಣಿಂಗೆ ಕಂಡಿದಿಲ್ಲೇ ಆ ದಾರೀಲಿ. ಆದರೆ ಆರೋ ಹಿಂದಂದ ಬಂದಾಂಗೆ ಆದ್ದು…! ಭ್ರಮೆಯೋ ಸತ್ಯವೋ ಗೊಂತಿಲ್ಲೇ. ಎಲ್ಲವುದೆ ಕಣ್ಣಿಂಗೆ ಕಾಣ್ತಿಲ್ಲೆ, ಕೆಲವು ಅನುಭವಕ್ಕೆ ಮಾತ್ರ ಬಪ್ಪದೂಳಿ ಹಿರಿಯೋರು ಹೇಳುಗು. ಯಾವುದಾರು ಶಕ್ತಿ ನಿಜಕ್ಕೂ ಎನ್ನ ಹೆದರ್ಸುಲೆ ಬಂದದಾ? ಅದುವೇ ಕಳ್ಕಿದ ಶಬ್ದ ಮಾಡಿದ್ದ…!? ಅಥವಾ ಮೊದಲಿಂದಲೇ ಆ ಜಾಗೆಯ ಕಥೆ ಕೇಳಿದ್ದ ಎನಗೆ ಮನಸಿನ ಮೂಲೆಲಿದ್ದ ಹೆದರಿಕೆಂದಾಗಿ ಆನು ಭ್ರಮೆಗೊಳಗಾದ್ದ…!? ಇಂದಿಗೂ ಎನಗೆ ಅರ್ಥ ಆಯ್ದಿಲ್ಲೆ. ಅಂತೂ ಅಂದಿಂದ ನಂತ್ರ ಎನ್ನ ಭಂಡ ಧೈರ್ಯಕ್ಕೆ ಒಂದು ಫುಲ್ ಸ್ಟಾಪ್ ಬಿದ್ದತ್ತು ಹೇಳಿಯೇ ಹೇಳ್ಳಕ್ಕು. ಎಂತದೇ ಆಗಲಿ ಇನ್ನು ಆ ದಾರೀಲಿ ಒಬ್ಬನೇ ನಡಕ್ಕೊಂಡು ಹೋವ್ತಿಲ್ಲೆ, ಹೋದರೂ ನಡುಮಧ್ಯಾಹ್ನ ಹೊತ್ತಡಗಿದ ಮೇಲೆ ಹೋವ್ತಿಲ್ಲೆ ಹೇಳಿ ಮನಸಿನ ಗಟ್ಟಿ ಮಾಡಿಯೊಂಡೆ. ಪುನಃ ಹೀಂಗೇ ಹೋಗಿ ನೋಡ್ತೇಳಿ‌ ಹೋಯ್ದಿಲ್ಲೆ, ಹೋಪಾಳಿ ಕೆಲವೊಂದರಿ ಅನ್ಸಿರೂ ಆ ಧೈರ್ಯ ಬೈಂದಿಲ್ಲೆ .

LEAVE A REPLY

Please enter your comment!
Please enter your name here