ಪುಸ್ತಕ ವಿಮರ್ಶೆ- ಯೋಗಿಯ ಆತ್ಮಕಥೆ

ಯೋಗಿಯ ಆತ್ಮಕಥೆ

” ಯೋಗಿ ತಪಸ್ವಿಗಳಿಗಿಂತಲೂ ಅಧಿಕ, ಜ್ಞಾನಿಗಳಿಗಿಂತಲೂ ಅಧಿಕ, ಕರ್ಮಿಗಳಿಗಿಂತಲೂ ಅಧಿಕ ಎಂದು ನನ್ನ ಅಭಿಪ್ರಾಯ. ಆದ್ದರಿಂದ ಓ ಅರ್ಜುನ, ನೀನು ಯೋಗಿಯಾಗು” — ಭಗವದ್ಗೀತೆ .

4-5 ವರ್ಷಂದ ಆಧ್ಯಾತ್ಮ ಲ್ಲಿ ಕುತೂಹಲ ಹೊಂದಿದ ಎನಗೆ ಅದೇ ಆಸಕ್ತಿ ಇಪ್ಪ ಕೆಲವು ಜನಂಗ ನಿಧಾನಕ್ಕೆ ಸಿಕ್ಕುತ್ತಾ ಹೋದವು. ಹಾಂಗೆಯೇ ಎನ್ನ ಅಣ್ಣ ಒಬ್ಬರು ಸೂಚಿಸಿದ ಒಂದು ಪುಸ್ತಕವೇ ಪರಮಹಂಸ ಯೋಗಾನಂದರ “ಯೋಗಿಯ ಆತ್ಮಕಥೆ”. ಸಾಧಾರಣ ವಿಶ್ವದ 46 ಭಾಷೆಗಳಲ್ಲಿ ಇಪ್ಪಂಥ ಈ ಪುಸ್ತಕವ ಆನು ಕನ್ನಡಲ್ಲಿ ಓದಿದೆ. ಸುಮಾರು 600- 650 ಪುಟಗಳ ಈ ಶ್ರೇಷ್ಠ ಪುಸ್ತಕದ ವಿಮರ್ಶೆ ಮಾಡುವಷ್ಟು ಯೋಗ್ಯತೆ ಎನಗೆ ಖಂಡಿತ ಈಗ ಇಲ್ಲೆ. ರಜನಿಕಾಂತ್, ವಿರಾಟ್ ಕೊಹ್ಲಿ, ಸ್ಟೀವ್ ಜಾಬ್ಸ್ ಇತ್ಯಾದಿ ಅನೇಕ ಗಣ್ಯ ವ್ಯಕ್ತಿಗೊಕ್ಕೆ ಮಾರ್ಗದರ್ಶಕವಾಗಿ ಇಪ್ಪಂಥ ಈ ಪುಸ್ತಕದ ಬಗ್ಗೆ ಎನ್ನ ಅಭಿಪ್ರಾಯ ತಿಳಿಸುವ ಒಂದು ಸಣ್ಣ ಪ್ರಯತ್ನ ಅಷ್ಟೇ.

ಅಧ್ಯಾತ್ಮದ ಬಗ್ಗೆ ಅತ್ಯಂತ ಸ್ಪಷ್ಟ ನಿಲುವು, ಅರ್ಥಪೂರ್ಣವಾದ ಒಂದು ದಾರಿ, ಆಧ್ಯಾತ್ಮ ಹೇಳಿದರೆ ಎಂತರ? ಮತ್ತೆ ಅದೊಂದು ಸಂಪೂರ್ಣ ವೈಜ್ಞಾನಿಕ ಮಾರ್ಗ ಹೇಳುವಂತ ನಿಜವಾದ ಚಿತ್ರಣ ಕೊಡುವ ಈ ಪುಸ್ತಕ ಒಂದು ರೀತಿಲಿ ನಾವು ನಮ್ಮ ಜೀವನವ ನೋಡುವ ದೃಷ್ಟಿಕೋನವ ಬದಲಾಯಿಸುತ್ತು ಹೇಳಿ ಎನ್ನ ಅಭಿಪ್ರಾಯ.

ಆಧ್ಯಾತ್ಮ ಹೇಳುದರ ಬಗ್ಗೆ ಜನಂಗಳ ಅಭಿಪ್ರಾಯವೇ ಈಗ ಬೇರೆಯೇ ಇದ್ದು. ಅದಕ್ಕೆ ಕಾರಣಂಗ ಸುಮಾರಿದ್ದು. ಅದರ ಬಗ್ಗೆ ಇನ್ನೊಂದರಿ ವಿಮರ್ಶೆ ಮಾಡುವ. ಆದರೆ ಈ ಪುಸ್ತಕ ಓದಿದ ನಂತರ ಎನ್ನ ಅಭಿಪ್ರಾಯ ಬದಲಾತು.

ಪರಮಹಂಸ ಯೋಗಾನಂದರ ಮೂಲ ಹೆಸರು ಮುಕುಂದ ಹೇಳಿ. ಅವಕ್ಕೆ ಅತ್ಯುತ್ತಮವಾದ, ಅಧ್ಯಾತ್ಮದ ಕಡೆಂಗೆ ಮೊದಲೇ ಮೋರೆ ಮಾಡಿ ಇಪ್ಪಂಥ ಕುಟುಂಬಲ್ಲೇ ಹುಟ್ಟುವ ಭಾಗ್ಯ ಒದಗಿದ ಕಾರಣ ಅವಕ್ಕೆ ಅವರ ಕುಟುಂಬಲ್ಲಿ ಬೆಂಬಲ ಇತ್ತು ಹೇಳ್ಳಕ್ಕು. ಸುರುವಾಣ ಅಧ್ಯಾಯಂಗಳಲ್ಲಿ ಅವರ ಶೈಶವ, ಬಾಲ್ಯದ ಅನುಭವಂಗಳ ಹೇಳಿದ್ದವು. ಶೈಶವಲ್ಲಿ ಎಂತ ಆಗಿರ್ತು ಹೇಳಿ ಹೆಚ್ಚಾಗಿ ಸಾಮಾನ್ಯರಿಂಗೆ ನೆಂಪಿಪ್ಪದು ತುಂಬಾ ಕಡಮ್ಮೆ. ಆದರೆ ಮುಕುಂದನ ಶೈಶವದ ಕಷ್ಟ-ಸುಖಗಳ ಬಗ್ಗೆ ಒಂದು ಕಡೆ ಅವು ಹಂಚಿಕೊಂಡಿಪ್ಪದು ವಿಶೇಷ ಅನಿಸುತ್ತು. ಖಂಡಿತವಾಗಿಯೂ ಒಬ್ಬ ವ್ಯಕ್ತಿ ಯೋಗಿ ಆಯೆಕ್ಕು ಹೇಳಿದರೆ ಅಂವ ಎಷ್ಟೋ ಜನ್ಮಂಗಳ ಅದೇ ದಾರಿಲಿ ವ್ಯಯಿಸಿರ್ತ. ಹಾಂಗಿಪ್ಪಗ ಈ ಜನ್ಮಲ್ಲಿ ಅಂವ ವಿಶೇಷವಾಗಿ ಅಥವಾ ಅಸಾಮಾನ್ಯವಾಗಿ ಇಪ್ಪದ್ರಲ್ಲಿ ಆಶ್ಚರ್ಯ ಇಲ್ಲೆ.

ಯೋಗಾನಂದರ ಅಪ್ಪ-ಅಮ್ಮ , ಅವರ ಗುರುಗಳು ಮತ್ತೆ ಅವರ ದೈನಂದಿನ ಸಂಸಾರಿಕ ಜೀವನದ ಬಗ್ಗೆ ತಿಳಿಸಿಪ್ಪ ವಿಷಯಂಗ ನಿಜವಾಗಿದೆ ಒಬ್ಬ ಸಂಸಾರಸ್ಥ ಕೂಡ ಅಧ್ಯಾತ್ಮ ಲ್ಲಿ ಮುಂದುವರಿವದು ಸಾದ್ಯ ಇದ್ದು ಹೇಳಿ ನಮಗೆ ಅರ್ಥಮಾಡಿಸುತ್ತು. ಯೋಗಾನಂದರ ಅಪ್ಪ-ಅಮ್ಮನವರ ಗುರುಗಳಾದ ಲಾಹಿರಿ ಮಹಾಶಯರ ಶಿಷ್ಯರಾದ ಶ್ರೀ ಯುಕ್ತೇಶ್ವರ ಗಿರಿಗಳು ಯೋಗಾನಂದರ ಆಧ್ಯಾತ್ಮಿಕ ಗುರುಗಳು.

ಯೋಗಾನಂದರ ಹಿಮಾಲಯದ ಪ್ರಯಾಣಂಗ ಅದರ ಮಧ್ಯೆ ಅವಕ್ಕೆ ಅಪ್ಪಂತ ಬೇರೆಬೇರೆ ವ್ಯಕ್ತಿಗಳ ಭೇಟಿ ಮತ್ತೆ ಅನುಭವಂಗಳ ಬಗ್ಗೆ ಓದುವಾಗ ನಿಜಕ್ಕೂ ರೋಮಾಂಚನ ಆವ್ತು.

ಸ್ವಾಮಿ ಪ್ರಣವಾನಂದರು, ಗಂಧ ಬಾಬಾ, ಹುಲಿ ಸ್ವಾಮಿ, ವಿಜ್ಞಾನಿ ಜೆ ಸಿ ಬೋಸ್, ರಾಮ್ ಗೋಪಾಲ್ ಮಜುಂದಾರ್, ಅಫ್ಜಲ್ ಖಾನ್, ರವೀಂದ್ರನಾಥ ಟಾಗೋರ್, ಗಾಂಧೀಜಿ, ಆನಂದ ಮಯಿ ಮಾ, ನಿರಾಹಾರ ಯೋಗಿನಿ ಹೀಂಗೆ ಅನೇಕರ ಬಗ್ಗೆ ಅವರ ಆಧ್ಯಾತ್ಮಿಕ ಜೀವನ ಅನುಭವಂಗಳ ಬಗ್ಗೆ ಬೇರೆಬೇರೆ ಅಧ್ಯಾಯಂಗಳಾಗಿ ಹೇಳಿದ್ದವು.

ಇದೆಲ್ಲಾ ಅಧ್ಯಾಯಂಗಳಲ್ಲೂ ಮುಖ್ಯವಾಗಿ ನಮಗೆ ಎಂತ ಅರ್ಥ ಆವ್ತು ಹೇಳಿದರೆ, ಈ ಎಲ್ಲಾ ವ್ಯಕ್ತಿಗಳ ಆಧ್ಯಾತ್ಮಿಕ ಜೀವನ ತುಂಬಾ ಕಡೆ ಅವರ ಅಲೌಕಿಕ ಅನುಭವಂಗ, ಪವಾಡಂಗಳ ಬಗ್ಗೆ ವಿವರಣೆ ಇದ್ದು. ಅವೆಲ್ಲ ಮೇಲ್ನೋಟಕ್ಕೆ ನಮಗೆ ನಂಬುಲೇ ಕಷ್ಟ ಆವ್ತು. ಆದರೆ ಪುಸ್ತಕಲ್ಲಿ ಮುಂದಂಗೆ ಇಪ್ಪ ಕೆಲವು ಅಧ್ಯಾಯಂಗಳಲ್ಲಿ ವೈಜ್ಞಾನಿಕವಾಗಿ ಅವೆಲ್ಲ ಹೇಂಗೆ ನಡೆತ್ತು ಹೇಳಿ ಕಾರಣ ಸಮೇತ ಸ್ಪಷ್ಟವಾದ ವಿವರಣೆ ಇದ್ದು.

ಈಗ ರೇಡಿಯೋ ತರಂಗಂಗ ನಮಗೆ ಕಾಣದ್ದರೂ ಅವು ಕೊಡುವ ಉಪಯೋಗಂದಾಗಿ ನಾವು ಅವುಗಳ ಅಸ್ತಿತ್ವವ ನಂಬಿದ್ದು ಎಂತಕೆ ಹೇಳಿದರೆ ಅದು ವಿಜ್ಞಾನ. ಅದು ಹೇಂಗೆ ನಡೆತ್ತು ಹೇಳುದರ ಸ್ಪಷ್ಟ ವಿವರ ನಮ್ಮತ್ರ ಇದ್ದು. ಇದೇ ರೀತಿ ಅಧ್ಯಾತ್ಮವು ಕೂಡಾ ನಮ್ಮ ಇಂದ್ರಿಯಕ್ಕೆ ಅನುಭವಕ್ಕೆ ಬಾರದ್ರೂ ದೇವರು ಹೇಳ್ತಂವ ಇದ್ದ ಮತ್ತೆ ಅಂವ ಒಂದು ಶಕ್ತಿ, ನಾವೆಲ್ಲ ಅವನ ಅಂಶ, ಅವನ ಅನುಭವವೂ ನಮಗೆ ಆವ್ತು, ಯಾವ ರೀತಿಲಿ ಆವ್ತು ಹೇಳುದರನ್ನು ಈ ಪುಸ್ತಕಲ್ಲಿ ಸರಿಯಾಗಿ ವಿವರಿಸಿದ್ದವು.

ಮನುಷ್ಯ ಎಷ್ಟು ಶ್ರೇಷ್ಠ ಸೃಷ್ಟಿ , ಅವಂಗೆ ಎಷ್ಟು ಶಕ್ತಿ ಇದ್ದು, ಅಂವ ಎಂತಕ್ಕೆ ಶ್ರೇಷ್ಠ ಅವನ ಕೈಯಿಂದ ಅಪ್ಪಂಥ ಎಷ್ಟೋ ವಿಶೇಷತೆಗಳ ಪುಸ್ತಕಲ್ಲಿ ಹೇಳಿದ್ದವು.ಮುಖ್ಯವಾಗಿ ಇವೆಲ್ಲವನ್ನು ಯೋಗಾನಂದರ ಅನುಭವಲ್ಲಿ ಹೇಳಿದ್ದು ಪುಸ್ತಕದ ವಿಶೇಷತೆ.

ವಿಶ್ವಾತ್ಮಕ ಪ್ರಜ್ಞೆ , ಸಮಾಧಿ ಸ್ಥಿತಿಯ ಅವರ ಅನುಭವಂಗ ಧ್ಯಾನಲ್ಲಿ ಅವಕ್ಕೆ ಆಯ್ಕೊಂಡಿತ್ತ ಅನುಭವಂಗ ಎಲ್ಲವೂ ಪ್ರತಿಯೊಬ್ಬ ಮನುಷ್ಯಂಗೂ ಅಪ್ಪಲೆ ಸಾಧ್ಯ ಇದ್ದು ಮತ್ತು ಅದಕ್ಕೆ ಭಾರತೀಯ ಯೋಗ ಪದ್ಧತಿ ಹೇಂಗೆ ಒಂದು ಸರಿಯಾದ ಮಾರ್ಗ ಹೇಳಿ ತಿಳಿಸಿದ್ದವು. ಹೆಚ್ಚಿನ ವಿಷಯಂಗೊಕ್ಕೂ ನಾವು ವೈಜ್ಞಾನಿಕ ವಿವರಣೆಂಗಳ ಕಾಂಬ ಕಾರಣ ನಮ್ಮ ನಂಬಿಕೆ ಹೆಚ್ಚು ಆವ್ತಾ ಹೋವ್ತು.

Autobiography of a Yogi (Kannada)

ಅಮೆರಿಕಾದ ಅನೇಕ ಪತ್ರಿಕೆಂಗಳಲ್ಲಿ ಈ ವಿವರಣೆಯ ಪ್ರಕಟವೂ ಮಾಡಿದ್ದವು. ಸುಮಾರು ಗಣ್ಯ ಸಂಸ್ಥೆ ಮತ್ತು ವ್ಯಕ್ತಿಗಳಿಂದ ಒಪ್ಪಿಗೆಯು ಆಗಿ ತಕ್ಕ ಮನ್ನಣೆಯೂ ಸಿಕ್ಕಿದ್ದು. ಯೋಗಾನಂದರು ಅವರ ಗುರುಗಳ ಸಲಹೆಯ ಹಾಂಗೆ ಸುಮಾರು ದೇಶಂಗೋಕ್ಕೆ ಹೋಗಿ ಅಲ್ಲಿ ಯೋಗ, ಅಧ್ಯಾತ್ಮದ ಚಿಂತನೆಗಳ ತಿಳಿಸಿ ಪ್ರಚಾರ ಮಾಡಿ ಅನೇಕರಿಂಗೆ ಮಾರ್ಗದರ್ಶಕರಾಗಿದ್ದವು. ಅವರ ದಾರಿಯ ಇನ್ನೊಂದು ವಿಶೇಷತೆ ಅಂತ ಹೇಳಿದರೆ ಅವು ಎಲ್ಲ ಧರ್ಮಂಗಳ ಸಾರವ ತಿಳುದು, ಧರ್ಮಂಗಳ ಮೂಲ ಒಂದೇ ಹೇಳುದರ ಸ್ಪಷ್ಟವಾಗಿ ಈ ಪುಸ್ತಕಲ್ಲಿ ಸಾಬೀತು ಮಾಡಿದ್ದವು. ಹಾಂಗಾಗಿ ನಮಗೆ ಈ ಪುಸ್ತಕದಲ್ಲಿ ಬೈಬಲ್, ಭಗವದ್ಗೀತೆ, ಮಹಮ್ಮದೀಯರ ಮಾತುಗ ವಿವರಣೆಂಗ ಕಾಂಬಲೆ ಸಿಕ್ಕುತ್ತು. ಎಲ್ಲಾ ಧರ್ಮಂಗಳ ಗುರಿ ಒಂದೇ, ಆದರೆ ದಾರಿ ಮಾತ್ರ ಬೇರೆ ಬೇರೆ.

ಇಲ್ಲಿ ಯಾವುದೇ ಧರ್ಮದ ಅಥವಾ ದೇವರ, ಅತಿಶ್ರೇಷ್ಠ ಹೇಳುದಾಗಲೀ ಅಥವಾ ಕಡೆಗಣಿಸುದಾಗಲಿ, ನಮ್ಮದು ಮಾತ್ರ ಶ್ರೇಷ್ಠ ಹೇಳುವ ಅಭಿಪ್ರಾಯ ಕೂಡ ಇಲ್ಲೆ. ಎಂತಕೆ ಹೇಳಿದರೆ ಮನುಷ್ಯ ಯಾವುದೇ ಧರ್ಮಲ್ಲಿ ಇದ್ದರೂ ದೇವರ ಅನುಭವ ಅಪ್ಪಂತ ಶಕ್ತಿ ಪ್ರತಿಯೊಬ್ಬರಲ್ಲೂ ಇದ್ದು ಆದರೆ ಅವರದ್ದೇ ಆದ ಸಮಯ ಬರಕ್ಕು ಅಷ್ಟೇ.

ಈ ಪುಸ್ತಕಂದ ಆನು ತಿಳ್ಕೊಂಡ ವಿಷಯಂಗಳಲ್ಲಿ ಒಂದು ಆಧ್ಯಾತ್ಮ ಹೇಳುದು ಒಂದು ವ್ಯಕ್ತಿಗೆ ಅವನ ಜೀವನಲ್ಲಿ ಇಪ್ಪ ಆಯ್ಕೆ ಅಥವಾ ಆಸಕ್ತಿಯ ವಿಷಯ ಅಲ್ಲ. ಅದು ಸತ್ಯ ಮತ್ತೆ ಅದು ಮಾತ್ರ ಸತ್ಯ. ನಾವು ಅದರ ಅರಿವದು ಮಾತ್ರ ಲೋಕಲ್ಲಿ ಹುಟ್ಟುವ ಪ್ರತಿಯೊಂದು ಪ್ರಾಣಿಯ ಪರಮೋಚ್ಚ ಗುರಿಯಾಗಿರ್ತು.

ಸಾವಿನ ನಂತ್ರಾಣ ಘಟ್ಟ, ಸಾಕ್ಷಾತ್ಕಾರ ಹೊಂದಿದ ವ್ಯಕ್ತಿಯ ಮುಂದಣ ಜೀವನಘಟ್ಟ ಹೇಂಗಿರ್ತು ಹೇಳಿ ಸಾಧ್ಯವಾದ ಮಟ್ಟಿಂಗೆ ಸಾಮಾನ್ಯರಿಂಗೆ ಅರ್ಥ ಅಪ್ಪ ರೀತಿಲಿ ಕೊಟ್ಟ ವಿವರಣೆಂಗಳ ನೋಡುವಾಗ ನಮಗೆ ನಮ್ಮ ನಮ್ಮ ಧರ್ಮಂಗಳ ಆಚಾರ-ವಿಚಾರ ಸಂಪ್ರದಾಯಂಗಳ ಮೂಲ ಅರ್ಥ, ಉದ್ದೇಶಂಗ ಒಂದು ಮಟ್ಟಿಂಗೆ ಅರ್ಥ ಆವ್ತು

ಯಾವ ವ್ಯಕ್ತಿಗಳೂ, ಘಟನೆಗಳೂ ನಮ್ಮ ಜೀವನಲ್ಲಿ ಸುಮ್ಮನೆ ಆವ್ತಿಲ್ಲೆ. ಪ್ರತಿಯೊಂದಕ್ಕೂ ಕಾರಣ ಮತ್ತು ಪರಿಣಾಮಂಗ ಇದ್ದೇ ಇರ್ತು.
ಯೋಗಾನಂದರು ಯೋಗದಾ ಸತ್ಸಂಗ ಸೊಸೈಟಿ ಹೇಳುವ ಸಂಸ್ಥೆಯ ಹುಟ್ಟುಹಾಕಿದ್ದವು. ಇದರ ಉದ್ದೇಶ ಲಾಹಿರಿ ಮಹಾಶಯರ ಗುರುಗ ಬಾಬಾಜಿಯವು ಪರಿಚಯಿಸಿದ ಕ್ರಿಯಾಯೋಗ ಹೇಳುವ ಒಂದು ಯೋಗ ತಂತ್ರವ ಪ್ರಪಂಚಕ್ಕೆ ತಿಳಿಸುದು ಮತ್ತು ನಿಜವಾದ ಅಧ್ಯಾತ್ಮದ ಆಸ್ಥೆ, ಜಿಜ್ಞಾಸೆ ಇಪ್ಪವಕ್ಕೆ ಇದರ ದೀಕ್ಷೆಯ ಕೊಡುದು.
ಈ ಸಂಸ್ಥೆ 1918ರಲ್ಲಿಯೇ ಜಾರ್ಖಂಡ್ ನ ರಾಂಚಿಲಿ ಸ್ಥಾಪನೆಯಾದರೂ ಇಂದಿನವರೆಗೂ ಯೋಗವು ಅಲ್ಲಿ ಪೈಸೆಗೆ ಮಾರಾಟ ಮಾಡುವ ವ್ಯಾಪಾರ ಆಯ್ದಿಲ್ಲೆ. ನಮ್ಮ ಜಿಜ್ಞಾಸೆ ಮತ್ತು ನಮ್ಮ ಅರ್ಪಣೆ ಎಷ್ಟಿರ್ತು ಹೇಳುದರ ಮೇಲೆ ನಮಗೆ ಕ್ರಿಯಾ ಯೋಗದ ದೀಕ್ಷೆ ಪಡಕ್ಕೊಂಬ ಅರ್ಹತೆ ಬತ್ತು. ಪೂರ್ಣವಾಗಿ ಅರ್ಪಿತಗೊಂಬ ವಿಶ್ವದ ಪ್ರತಿಯೊಬ್ಬ ವ್ಯಕ್ತಿಗೂ ಅಲ್ಲಿ ಸ್ಥಾನ ಇದ್ದು.
ಒಟ್ಟಾರೆಯಾಗಿ ಹೇಳುದಾದರೆ ಈ ಪುಸ್ತಕ ಆಧುನಿಕ ಕಾಲಕ್ಕೆ ಅತ್ಯಂತ ಪ್ರಶಸ್ತವಾದ ರೀತಿಲಿ ಅಧ್ಯಾತ್ಮ ಹೇಳುವ ವಿಶಾಲವಾದ ನಿಜ ಲೋಕವ ಪರಿಚಯಿಸುತ್ತು.
ಕೊನೆಯದಾಗಿ ಈ ಲೇಖನ ಓದಿಕ್ಕಿ ನಿಂಗ ಈ ಪುಸ್ತಕವ ಓದುವ ಮನಸ್ಸು ಮಾಡಿದರೆ ಎನ್ನ ಒಂದು ವಿನಂತಿ ಎಂತ ಹೇಳಿದರೆ ಪುಸ್ತಕ ಓದುವಾಗ ಮೊದಲೇ ಒಂದು ಅಭಿಪ್ರಾಯಕ್ಕೆ ಬಂದು ನಿರ್ಧಾರ ತೆಕ್ಕೊಂಡು ಓದೆಡಿ. ಎಂತಕೆ ಹೇಳಿದರೆ ಈ ಲೇಖನ ಕೇವಲ ಎನ್ನ ವೈಯಕ್ತಿಕ ಅಭಿಪ್ರಾಯ. ಅದೇ ಅಭಿಪ್ರಾಯ ಇನ್ನೊಬ್ಬಂಗೆ ಬರಕ್ಕೂ ಹೇಳಿ ಇಲ್ಲೆ. ದೃಷ್ಟಿಕೋನ ವ್ಯತ್ಯಾಸ ಇದ್ದ ಹಾಂಗೆ ಒಂದು ವಿಷಯದ ಬಗ್ಗೆ ವ್ಯಕ್ತಿಯಿಂದ ವ್ಯಕ್ತಿಗೆ ಅಭಿಪ್ರಾಯವು ವ್ಯತ್ಯಾಸ ಇರ್ತು. ಹಾಂಗಾಗಿ ವಿಶಾಲಮನೋಭಾವಂದ ಮನಸ್ಸು ಖಾಲಿ ಮಡುಗಿ ಓದಿದರೆ ಪುಸ್ತಕದ ನಿಜವಾದ ಅರ್ಥ ಎಲ್ಲರಿಂಗೂ ಸಿಕ್ಕುತ್ತು.
ವಿದ್ವಾಂಸರೊಬ್ಬರ ಮಾತಿನ ಹಾಂಗೆ ‘ನಮಗೆಲ್ಲಾ ನಮ್ಮ ತಲೆಲಿ ಇದ್ದದೇ ಭಗವದ್ಗೀತೆಲಿ ಕಾಣುತ್ತು, ಆದರೆ ಭಗವದ್ಗೀತೆಲಿ ಇಪ್ಪದು ನಮ್ಮ ತಲೆಯ ಒಳ ಹೋವುತ್ತೇ ಇಲ್ಲೆ.’ ಹೇಳುವ ಹಾಂಗೆ ಅಪ್ಪಲಾಗ ಅಷ್ಟೇ.

“ಸಾಮಾನ್ಯ ಮನುಷ್ಯ ಎಂದಾದರೊಮ್ಮೆ ಅಧ್ಯಾತ್ಮ ಜಿಜ್ಞಾಸೆಗೆ ತೊಡಗಬೇಕಾಗುತ್ತದೆ. ಸಹಸ್ರ ಮೈಲುಗಳ ಪಯಣವೂ ಒಂದು ಹೆಜ್ಜೆಯಿಂದಲೇ ಮೊದಲಾಗುತ್ತದೆ” – ಲಾವೊತ್ಸು.

ಪುಸ್ತಕ ಬೇಕಾದರೆ ಅಮೆಜ಼ೋನ್ , ಫ್ಲಿಪ್‌ಕಾರ್ಟ್ಲ ಇದ್ದು

2 COMMENTS

  1. ಅವರ ಪವಾಡಗಳ ನೋಡಿ ಪುಸ್ತಕ ಮುಚ್ಚಿ ಮಡುಗಿದೆ .. ಇನ್ನೊಂದು ಸರ್ತಿ ಓದುಲೆ ಪ್ರಯತ್ನ ಮಾಡ್ತೆ. ಧನ್ಯವಾದ

    • ಅಕ್ಕು, ಓದುಲೆ ಸಮಯ ಬಪ್ಪಗ ಓದುಲಕ್ಕು, ಅಷ್ಟಪ್ಪಗ ಮಧ್ಯಂದ ಅಲ್ಲ, ಸುರುವಿಂದ ಕ್ರಮಾಗತವಾಗಿ ಓದುವ ಪ್ರಯತ್ನ ಮಾಡಿ.

LEAVE A REPLY

Please enter your comment!
Please enter your name here