ಛಲಗಾತಿ ಒಪ್ಪಕ್ಕ

10
127
chalagati-oppakka

ಅಂದು ಉದಿಯಪ್ಪಗ ಆರು ಗಂಟೆ ಆಗಿತ್ತು. ಸುಪ್ರಿಯಾನ ಮನೆ ಹತ್ರಣ ಇದ್ದ ಮರಂದ ಹಕ್ಕಿಗಳ ಚಿಲಿಪಿಲಿ ಶಬ್ದ ಕೇಳಿಕೊಂಡಿತ್ತು. ಯಾವಾಗಣ ಹಾಂಗೆ ಅಂದು ಕೂಡ ಅಲಾರಾಂ ಅದರಷ್ಟಕ್ಕೆ ಅದು ಬಡ್ಕೊಂಡತ್ತು. ಸುಪ್ರಿಯಾಂಗೆ ಅಂದ್ರಾಣ ದಿನ ಜೋರು ತಲೆಬೇನೆ, ಏಳುಲೆ ಬಚ್ಚಿಕೊಂಡಿತ್ತು. ಕಣ್ಣೆಲ್ಲ ದಪ್ಪ ದಪ್ಪ ಆದಾಂಗೆ, ಕಣ್ಣು ಒಡವಲೆ ಕಷ್ಟ ಆತು. ಆದರೂ ಮನಸ್ಸಿಲ್ಲದ್ದೆ ಅಲಾರಾಂ ನಿಲ್ಸಿತು. ಯಾಂತ್ರಿಕ ಬದುಕಿಂಗೆ ಹೊಂದಿಕೊಂಡಿದ್ದ ಅದಕ್ಕೆ ಅಂದು ಎಂತಕೋ ಆಫೀಸಿಂಗೆ ಹೋಪಲೇ ಎಡಿಗಾಯಿದಿಲ್ಲೆ. ಇಂದ್ರಾಣ ದಿನ ಮನೆಯಿಂದ ಕೆಲಸ ಮಾಡಿದರಾತು ಹೇಳಿ ಗ್ರೇಶಿ ಅದರ ಹತ್ರ ಮನಿಗಿದ್ದ ಗೆಂಡಂಗೆ ವಿಷಯ ಹೇಳಿ ಪುನಃ ಮನಿಗಿತು.

“ಏಳು ಸು, ಗಂಟೆ ಎಂಟಾಕ್ಕೊಂಡು ಬಂತು!” ಹೇಳಿ ಅದರ ಗೆಂಡ ಎಳ್ಸುವಾಗ, ಗಟ್ಟಿ ಒರಕ್ಕಿಲಿದ್ದ ಸುಪ್ರಿಯಾ ಒಂದೇ ಸರ್ತಿಗೆ ಎದ್ದು ಕೂದತು. ಅದಕ್ಕೆ ಆಫೀಸು ಇಪ್ಪದು ಉದಿಯಪ್ಪಗ ಎಂಟರಿಂದ ಹೊತ್ತಪ್ಪಗ ಐದು ಗಂಟೆ ತನಕ. ಕೋಣೆಲಿದ್ದ ಗಂಟೆಯತ್ತ ಒಂದ್ಸಲ ನೋಡಿ, ಅಯ್ಯೋ ತಡವಾತನ್ನೇ ಹೇಳಿ ಗಡಿಬಿಡಿಲಿ ಮಂಚಂದ ಇಳುದು, ಮೈಲ್ ಕಳಿಸುಲೆ ಲ್ಯಾಪ್ಟಾಪ್ ತೆಗೆದತು. ಆಫೀಸಿಲಿ ಹೇಳಿತ್ತವು ಮನೆಯಿಂದ ಕೆಲಸ ಮಾಡುದರ ಎಂಗ ಬೆಂಬಲಿಸುತ್ತಿಲ್ಲೆ ಹೇಳಿ, ಹಾಂಗೆ ತಿಂಗಳಿಂಗೆ ಒಂದೆರಡು ಸಲ ಮಾಡಿದರೆ ತೊಂದರೆ ಇಲ್ಲೆ ಹೇಳಿ ಅದರ ಮ್ಯಾನೇಜರ್ ಹೇಳಿತ್ತು. ಇಂದು ಆನು ಮನೆಯಿಂದ ಮಾಡುದ್ದಕ್ಕೆ ಇನ್ನೆಂತ ಕಾದಿದ್ದೋ ಹೇಳಿ ಗ್ರೇಶಿಗೊಂಡು ಮ್ಯಾನೇಜರ್, ಟೀಮಿಂಗೆ ಮೈಲ್ ಕಳಿಸಿತು.

ಉದಿಯಪ್ಪಗಣ ಮನೆ ಕೆಲಸಗಳ ಮುಗಿಶಿ ಪುನಃ ಲ್ಯಾಪ್ಟಾಪ್ ಎದುರು ಕೂದಪ್ಪಗ, “ಇದಾ ಸು, ತೆಕ್ಕ ಕಾಪಿ, ಇಂದು ಆನೇ ನಿನಗೋಸ್ಕರ ಮಾಡಿದೆ” ಹೇಳಿ ಅದರ ಗೆಂಡ ಕಾಫಿ ಗ್ಲಾಸಿನ ಅದರೆದುರು ಒಡ್ಡಿದ, ಖುಷಿಲಿ ಕೊಂಡಾಟಲಿ ಸುಪ್ರಿಯಾ ಗ್ಲಾಸ್ ತೆಕ್ಕೊಂಡು, “ಥ್ಯಾಂಕ್ಸ್ ಆತಾ” ಹೇಳಿತು. “ಈಗ ತಲೆಬೇನೆ ಹೇಂಗಿದ್ದು?” ಹೇಳಿ ಅವ ಕೇಳಿಯಪ್ಪಗ, “ಈಗೊಂಚೂರು ಕಮ್ಮಿ ಆತು, ಆಫೀಸಿಂದ ತಲೆಬಿಶಿ ಅಪ್ಪ ಹಾಂಗೆ ಮೈಲ್ ಬಂದರೆ ಪುನಃ ಜಾಸ್ತಿ ಅಕ್ಕು” ನೆಗೆಮಾಡಿಗೊಂಡು ಹೇಳಿದ ಮೇಲೆ, ಉಳುದ ಮೈಲ್ಸ್ ನೋಡ್ಲೆ ಶುರು ಮಾಡಿತು. ಆಗ ಅದರ ಕಣ್ಣುಗವಕ್ಕೊಂದು ಮೈಲ್ ಸೆಳೆದತು, ಆಫೀಸಿನ ಮುಖ್ಯ ಈಮೈಲ್ ಐಡಿಯಿಂದ ಬಂದಿತ್ತು ಅದು. ಆಗ ನವೆಂಬರ್ ತಿಂಗಳು, ಇನ್ನು ಒಂದು ತಿಂಗಳಿಲಿ ಕ್ರಿಸ್ಮಸ್, ಹೊಸ ವರ್ಷ ಬತ್ತು. ಅಂತರಾಷ್ಟ್ರೀಯ ಕಂಪೆನಿ ಆದ ಕಾರಣ, ಅಮೆರಿಕಾಲಿ ಎಲ್ಲ ಹೆಚ್ಚಾಗಿ ಎಲ್ಲರೂ ರಜೆ ತೆಕ್ಕೊಳ್ತವು ಅಷ್ಟಪ್ಪಗ ಕೆಲಸದ ಒತ್ತಡ ಕೂಡ ಕಮ್ಮಿ ಆವ್ತು. ಹೀಂಗಾಗಿ ಡಿಸೆಂಬರ್’ಲಿ ಆಫೀಸಿನ ಪಾರ್ಟಿಗ ಜೋರಿರ್ತು.

ಆ ಈಮೈಲ್ ಹೀಂಗೆ ಬರೆದಿತ್ತು “ನಿಂಗೊಗೆ ಡ್ಯಾನ್ಸ್ ಮಾಡ್ಲೆ ಬತ್ತ? ಕಾಲಿಂಗೆ ಗೆಜ್ಜೆ ಕಟ್ಟಿ ವೇದಿಕೆ ಹತ್ತುಲೆ ರೆಡಿ ಇದ್ದೀರಾ? ಅಂಬಗ ತಡ ಎಂತಕೆ, ಕಂಪೆನಿ ಏರ್ಪಡಿಸ್ತಾ ಇಪ್ಪ ನೃತ್ಯ ಪ್ರದರ್ಶನಲಿ ಜಾಸ್ತಿ ಸಂಖೆಲಿ ಭಾಗವಹಿಸಿ ಎಲ್ಲೋರ ರಂಜಿಸೆಕ್ಕು”. ಸುಪ್ರಿಯಾಂಗೆ ಈ ಈಮೈಲ್ ಓದಿ, ಅದರ ಸಣ್ಣ ಇಪ್ಪಗಣ ಜೀವನ ನೆನಪಾತು. ಎಂತಕೆ ಹೇಳಿದರೆ ಅದು ಸಣ್ಣ ಇಪ್ಪಗ ಆಟ, ಪಾಠ – ಪಠ್ಯೇತರ ಚಟುವಟಿಕೆಲಿ ಯಾವಾಗ್ಲೂ ಮುಂದೆ. ಯಾವುದೇ ಸ್ಪರ್ಧೆಗ ಇರ್ಲಿ ಅದು ಎಲ್ಲದರಲ್ಲಿಯೂ ಭಾಗವಹಿಸಿಕೊಂಡು ಇತ್ತು. ಹೀಂಗಿಪ್ಪಗ ಒಂದು ಸಲ ಎಂತಾತು ಹೇಳಿದರೆ, ಪ್ರೌಢಶಾಲೆಲಿ ಇಪ್ಪಗ ಎಲ್ಲರೆದುರಿಂಗೆ ನಿಂದುಗೊಂಡು ಹಾಡೆಕ್ಕಾರೆ ಆದ ಘಟನೆಯಿಂದ ಮನಸ್ಸಿಂಗೆ ಬೇಜಾರಾಗಿ ಮತ್ತೆ ಸುಪ್ರಿಯಾ ವೇದಿಕೆ ಹತ್ತಿದ್ದೇ ಇಲ್ಲೆ!

ಅಂದು ಹಿಂಜರುದ ಕಾರಣ ಇಂದು ಸ್ಟೇಜ್ ಫಿಯರ್ ಹೆಮ್ಮರದ ಹಾಂಗೆ ದೊಡ್ಡಕ್ಕೆ ಬೆಳದಿತ್ತು. “ಎಂತ ಆಲೋಚನೆ ಒಪ್ಪಕ್ಕಂದು?” ಹೇಳಿ ಅದರ ಗೆಂಡ ಕೇಳಿಯಪ್ಪಗ, “ನೋಡು ಇಲ್ಲಿ, ಆಫೀಸಿನವು ಎಂತ ಕಳ್ಸಿದ್ದವು ಹೇಳಿ” ಅದರ ಲ್ಯಾಪ್ಟಾಪ್ ಗೆಂಡನ ಹೊಡೆ ತಿರುಗಿಸಿತು. “ಅದಾ ನೃತ್ಯ ಪ್ರದರ್ಶನ ಇದ್ದಡ, ಅದಕ್ಕೆ ರಿಜಿಸ್ಟರ್ ಮಾಡ್ಲೆ ಹೇಳಿದ್ದವು” ಹೇಳಿ ಅಸಕ್ಕಂದ ಅವ ಹೇಳಿಯಪ್ಪಗ, ಅದರ ಲೆಕ್ಕಕ್ಕೆ ತೆಕ್ಕೊಳ್ಳದೆ ಆಶೆಲಿ ಸುಪ್ರಿಯಾ “ಆನುದೆ ಡ್ಯಾನ್ಸ್ ಮಾಡೆಕ್ಕ?” ಹೇಳಿ ಪ್ರಶ್ನೆ ಕೇಳಿತು. “ಎಂತ ಹೇಳಿದೆ ನೀನು!! ನೀನು ಡ್ಯಾನ್ಸ್ ಮಾಡ್ತೆಯ? ಮದುವೆ ಆದ ಮೇಲೆ ಈಗಾದರೂ ನಿನ್ನ ಡ್ಯಾನ್ಸ್ ನೋಡುವ ಸೌಭಾಗ್ಯ ಬಂತು ನೋಡೆನಗೆ” ಹೇಳಿ ಕಣ್ಣೊಡೆದ. “ನಿನ್ನದೊಳ್ಳೆ ಕಥೆ!! ನಿನಗೆ ಎಲ್ಲವೂ ತಮಾಷೆ, ಆನು ಈಗಳೇ ಎನ್ನ ಫ್ರೆಂಡ್ ಹತ್ತೆರ ಕೇಳುತ್ತೆ” ಹೇಳಿ ಅದರ ಆಫೀಸಿನ ಫ್ರೆಂಡ್ ಅನುರಾಧಾಂಗೆ ಮೆಸೇಜು ಮಾಡಿತು.
“ಹಾಯ್ ಅನು, ಆಫೀಸು ಮೈಲ್ ನೋಡಿದೆಯ? ಆಫೀಸಿಲಿ ಡ್ಯಾನ್ಸ್ ಕಾರ್ಯಕ್ರಮ ಇದ್ದಡ, ನಾವಿಬ್ರು ಸೇರುವನ?” ಹೇಳಿ ಕೇಳಿತು. ಚೂರು ಹೊತ್ತಾದ ಮೇಲೆ ಆ ಕಡೆಯಿಂದ ಬಂದ ಉತ್ತರ “ನೀನು ಡ್ಯಾನ್ಸ್ ಮಾಡ್ತೆಯ ಸು!!!!” ಹೇಳಿ ಉದ್ದಕ್ಕೆ ಇದ್ದ ಆಶ್ಚರ್ಯಕರ ಚಿಹ್ನೆಗ ಸುಪ್ರಿಯಾಂಗೆ ಚೂರು ಬೇಜಾರಾದರೂ, ಇರ್ಲಿ ಪಾಪ ಅನುಗೆಂತ ಗೊಂತು ಆನು ಡ್ಯಾನ್ಸ್ ಮಾಡಿಗೊಂಡು ಇತ್ತಿದ್ದೆ ಹೇಳಿ ಸಮಾಧಾನ ತರ್ಸುತ್ತಾ, “ಪ್ರಯತ್ನ ಪಡುವ ಹೇಳಿ” ಹಾಂಗೆ ಅನುವಿಂಗೆ ವಾಪಸ್ ಮೆಸೇಜ್ ಮಾಡಿತು. “ವಂಡರ್ಫುಲ್ ಸು” ಹೇಳಿ ಹೆಬ್ಬೆರಳು ಮೇಲೆತ್ತಿದ ಅನುವಿನ ಪ್ರತಿಕ್ರಿಯೆ ನೋಡಿ ಸುಪ್ರಿಯಾಂಗೆ ಖುಷಿಯೋ ಖುಷಿ. ಇಬ್ಬರುದೇ ಅಂದೇ ರಿಜಿಸ್ಟರ್ ಮಾಡಿಕೊಂಡವು. ಶಾಲೆಲಿ ಇಪ್ಪಗ ಮಕ್ಕೊ ಕಮ್ಮಿಯಿದ್ದೇ ಆನು ನೃತ್ಯವ ಮುಂದುವರಿಶಿದ್ದಿಲ್ಲೆ, ಇನ್ನು ಇಲ್ಲಿ ಆಫೀಸಿಲಿ ಸಾವಿರಾರು ಜನಂಗಳ ಎದುರು ಎನಗೆ ಧೈರ್ಯಂದ ಡ್ಯಾನ್ಸ್ ಮಾಡ್ಲೆ ಎಡಿಗ ಹೇಳಿ ಚಿಂತೆಯಾತು ಒಪ್ಪಕ್ಕ ಸುಪ್ರಿಯಾಂಗೆ.

ಅದರ ಹಿಂಜರಿಕೆಯ ಮತ್ತಷ್ಟು ಹೆದರಿಸುವ ಹಾಂಗೆ ಮರುದಿನವೇ ರಿಜಿಸ್ಟರ್ ಮಾಡಿದ್ದವರೆಲ್ಲೋರ ಮೊದಲಾಣ ಮೀಟಿಂಗಿಗೆ ಹೇಳಿ ದಿನಿಯೇಳಿದವು. ಹೆದರಿಗೊಂಡೇ ಮೀಟಿಂಗ್ ರೂಮಿಂಗೆ ಹೋದತು ಸುಪ್ರಿಯಾ. ಹೆದರಡ, ಆನಿದ್ದೆ ಹೇಳಿ ಅದರ ಕೈತಟ್ಟಿ ಭರವಸೆ ಕೊಟ್ಟತು ಅದರ ಫ್ರೆಂಡ್ ಅನು. ಆಯೋಜಕರ ಕಮಿಟಿ ಅಲ್ಲಿಪ್ಪವರ ಗುಂಪು ಮಾಡಿ, ಯಾವ ಪದ್ಯಕ್ಕೆಲ್ಲ ಡ್ಯಾನ್ಸ್ ಮಾಡ್ಲಕ್ಕು, ಅಭ್ಯಾಸದ ಅವಧಿ ಇದೆಲ್ಲ ಚರ್ಚೆ ಮಾಡಿತು. ಜನಂಗಳಿಂದ ತುಂಬುಕೊಂಡಿದ್ದ ಆ ಕೋಣೆಲಿ ಒಂದು ಮೂಲೆಲಿ ಮುದುಡಿಗೊಂಡು ನಿಂದಿತ್ತು ಸುಪ್ರಿಯಾ. ಅದರ ಸರದಿ ಬಂದಪ್ಪಗ ಮನಸ್ಸಿಂಗೆ ಬಂದ ಯಾವುದೋ ಪದ್ಯದ ಸಲಹೆ ಕೊಟ್ಟತು ಕಮಿಟಿಗೆ. ಅಂತೂ ಮೀಟಿಂಗ್ ಮುಗಿವದರೊಳ ಅಲ್ಲಿಪ್ಪವೆಲ್ಲಾ ಒಂದೊಂದು ಗುಂಪಿಂಗೆ ಸೇರಿತ್ತವು. ಸುಪ್ರಿಯಾಂಗೆ ಆಶಾಕಿರಣವಾಗಿ ಅನುರಾಧ ಕೂಡ ಅದರ ಗುಂಪಿಂಗೆ ಆಯ್ಕೆಯಾಗಿತ್ತು. ಹೆಚ್ಚು ದಿನ ಇಲ್ಲೆ, ಅಭ್ಯಾಸ ಶುರು ಮಾಡ್ಲೆ ತಡವು ಮಾಡೆಡಿ ಹೇಳಿ ಕಮಿಟಿ ಹೇಳಿಯಪ್ಪಗ, ನಾಳೆಯೇ ಶುರು ಮಾಡ್ತೆಯ ಹೇಳಿ ಎಲ್ಲಾ ತಂಡಂಗ ಆಶ್ವಾಸನೆ ಕೊಟ್ಟವು.

ಅಂದು ಅಭ್ಯಾಸದ ಮೊದಲಾಣ ದಿನ ಆಗಿತ್ತು. ಹೇಳಿದ ಸಮಯಕ್ಕೆ ಹೇಳಿದ ಜಾಗೆಲಿ ಸುಪ್ರಿಯಾ – ಅನುರಾಧರ ತಂಡ ಸೇರಿದವು. ಅವರಿಬ್ಬರ ಸೇರಿಸಿ ಹತ್ತು ಜನಂಗ ಇಪ್ಪ ಗುಂಪಾಗಿತ್ತು ಅದು. ಪ್ರತೀ ತಂಡಕ್ಕೆ ಹತ್ತು ನಿಮಿಷಂಗಳ ಅವಕಾಶ ಕೊಟ್ಟಿತ್ತವು ನೃತ್ಯ ಪ್ರದರ್ಶನಕ್ಕೆ, ಹಿಂದ್ರಾಣ ದಿನ ಪಟ್ಟಿ ಮಾಡಿದ್ದ ಪದ್ಯಲಿ ಕೆಲವು ಲಾಯ್ಕ ಇಪ್ಪದರ, ಇವರ ತಂಡಕ್ಕೆ ಒಪ್ಪುವ ಪದ್ಯಂಗಳ ಆಯ್ಕೆ ಮಾಡಿತು ಇವರಿಬ್ಬರ ತಂಡ. ಆ ತಂಡದ ನಾಯಕಿಗೆ ಅನುರಾಧ ಚೆಂದಕೆ ನೃತ್ಯ ಮಾಡ್ತು ಹೇಳಿ ಗೊಂತಿತ್ತು, ಹಾಂಗೆ ಅದಕ್ಕೆ ಒಂದು ಪದ್ಯಕ್ಕೆ ಕೊರಿಯೋಗ್ರಫಿ ಮಾಡ್ಲೆ ಹೇಳಿತು. ಅನು ಕಲಿಶುವ ಹೆಜ್ಜೆಗ ಚೂರು ಸುಲಭ ಇಕ್ಕು ಹೇಳಿ ಗ್ರೇಶಿ ಸುಪ್ರಿಯಾ ಅನುವಿನೊಟ್ಟಿಂಗೆ ಸೇರಿಕೊಂಡತು. ಎಷ್ಟೋ ವರ್ಷ ಆದ ಮೇಲೆ ಸುಪ್ರಿಯಾ ಅದರ ಕಾಲುಗ ಪದ್ಯಕ್ಕೆ ಅಪ್ಪ ಹಾಂಗೆ ನೆಲಕ್ಕೆ ಬಡಿಯಕ್ಕಾತು, ಪದ್ಯದ ರಾಗ ತಾಳಕ್ಕೆ ಅಪ್ಪ ಹಾಂಗೆ ಕಾಲುಗ ಹೆಜ್ಜೆ ಹಾಯೆಕ್ಕಾತು. ಅನು ಅದರ ಸಣ್ಣ ಟೀಮ್ ಸುಲಭವಾಗಿ ಕಲಿಯಲಿ ಹೇಳಿ ಒಂದೊಂದೇ ಹೆಜ್ಜೆಯ ಕೌಂಟ್ಸ್ ಪ್ರಕಾರ ಕಲಿಶಿತು. ಅನು ಮಾಡಿದಾಂಗೆ ಸುಪ್ರಿಯಾ ಕೂಡ ಕೈ ಕಾಲುಗಳ ಅಲ್ಲಾಡಿಸುಲೆ ಮೊದಲುಗೊಂಡತು.

ಹೀಂಗೆ ಸುಮಾರು ಒಂದು ತಿಂಗಳ ಮಟ್ಟಿಂಗೆ ಅಭ್ಯಾಸ ಮುಂದುವರುದ ಕಾರಣ ಸುಪ್ರಿಯಾಂಗೆ ಹೊಸ ಚೈತನ್ಯ, ಭರವಸೆ ಬಂತು. “ಒಪ್ಪಕ್ಕ, ನೀನು ಆಫೀಸಿಲಿ ಕೆಲಸ ಮಾಡ್ತಾ ಇದ್ದೆಯೋ ಅಥವಾ ಬರೀ ಅಭ್ಯಾಸವೇ ನಡೆತ್ತಾ ಇದ್ದಾ?” ಹೇಳಿ ಅದರ ಗೆಂಡ ಕಾಲೆಳಕ್ಕೊಂಡು ಇತ್ತಿದ್ದ. ಅಕೇರಿಯಣ ಹಂತದ ತಯಾರಿಗ ಎಲ್ಲ ಮುಗಿಶಿ, ನೃತ್ಯ ಪ್ರದರ್ಶನದ ದಿನ ಬಂದೇ ಬಿಟ್ಟತು. ಸುಪ್ರಿಯಾಂಗೆ ಒಂದು ವಾರಂದ ಒಳಾಂದಲೇ ಹೆದರಿಕೆ ಆಕ್ಕೊಂಡಿತ್ತು. ವೇದಿಕೆಗೆ ಹೋದ ಮೇಲೆ ತಮಾಷೆಯ ವಸ್ತುವಾದರೆ ಹೇಳಿ ಅಳುಕು. ಮಧ್ಯಾಣ ಮೇಲಣ ಕಾರ್ಯಕ್ರಮಕ್ಕೆ ಉದಿಯಪ್ಪಗಂದಲೇ ತರಾತುರಿಯ ಓಡಾಟಲ್ಲಿತ್ತು ಆಯೋಜಕರ ಕಮಿಟಿ. ವೇದಿಕೆ ಸಿದ್ಧಗೊಂಡಾಗಿತ್ತು, ದೊಡ್ಡಮಟ್ಟದ ಲೈಟ್ಸ್, ಮೈಕುಗ, ಸ್ಪೀಕರ್ಸ್ ಮಡಿಗಿತ್ತವು. ಆಫೀಸಿನ ಉದ್ಯೋಗಿಗ ಎಲ್ಲ ಒಬ್ಬೊಬ್ಬನೇ ಸಭೆಗೆ ಬಪ್ಪಲೆ ಶುರು ಮಾಡಿದವು. ಸುಪ್ರಿಯಾನ ತಂಡ ಡ್ರೆಸ್, ಮೇಕಪ್ ಎಲ್ಲ ಮಾಡಿ ರೆಡಿಯಾಗಿತ್ತು. ಗ್ರೇಶಿದ ಸಮಯಕ್ಕೆ ಅದರ ತಂಡವ ವೇದಿಕೆಗೆ ದಿನಿಯೇಳಿದವು.

ಸುಪ್ರಿಯಾಂಗೆ ಒಂದೇ ಸಲ ನಡುಕ ಬಂದಾಂಗೆ ಆತು, ಜಗಮಗ ಅಪ್ಪ ಬೆಳಕಿನ ಮಧ್ಯೆ ವೇದಿಕೆ ಹತ್ತಿಯಪ್ಪಗ ಕೆಳ ಇಪ್ಪವೆಲ್ಲ ಕಸ್ತಲೆಲಿಇತ್ತವು. ಹಾಂಗಾಗಿ ಅದಕ್ಕೊಂಚೂರು ಧೈರ್ಯ ಬಂತು. ದೇವರಿಂಗೆ ಮನಸ್ಸಿಲೇ ನಮಸ್ಕಾರ ಮಾಡಿ ನೃತ್ಯ ಮುಗಿಶಿಯಪ್ಪಗ, ಅದಕ್ಕೆ ಆನೇನೋ ಸಾಧಿಸಿದೆ ಹೇಳಿ ಆತ್ಮಸಂತೃಪ್ತಿಯಾತು. ನೃತ್ಯ ಮಾಡುವಾಗ ಕೆಲವು ಹೆಜ್ಜೆಗಳೆಲ್ಲ ಮರೆತು ಹೋಗಿತ್ತು, ಆದರೂ ಅದಕ್ಕೆ ಡ್ಯಾನ್ಸ್ ಮಾಡ್ಲೆ ಎಡಿಗು ಹೇಳುವ ವಿಶ್ವಾಸ ಬಂದಿತ್ತು. ಆದರೆ ಆ ಖುಷಿ ಜಾಸ್ತಿ ಸಮಯ ಉಳುದ್ದಿಲ್ಲೆ. ಕಾರ್ಯಕ್ರಮ ಮುಗಿಶಿಕ್ಕಿ ಸುಪ್ರಿಯಾ – ಅನುರಾಧ ಅವರವರ ಡೆಸ್ಕಿಂಗೆ ಹೋದಪ್ಪಗ ಅವರ ಕೊಲೀಗ್ಸ್ ಮಾತಾಡಿಸುಲೆ ಬಂದವು. ಅನುರಾಧನ ಹತ್ರ “ನಿಂಗಳ ನೃತ್ಯ ನಿಜವಾಗಿಯೂ ಅದ್ಭುತವಾಗಿತ್ತು” ಹೇಳಿ ಅವ್ವೆಲ್ಲ ಹೊಗಳುಲೆ ಶುರು ಮಾಡಿಯಪ್ಪಗ, ಅನುರಾಧನ ಹತ್ರವೇ ಇದ್ದ ಸುಪ್ರಿಯಾಂಗೆ ಒಂಥರ ಕಸಿವಿಸಿ ಅಪ್ಪಲೆ ಶುರುವಾತು, ಎನ್ನ ಬಗ್ಗೆ ಆರೂ ಎಂತ ಹೇಳ್ತಾ ಇಲ್ಲೆ ಹೇಳಿ!

ಅಂಬಗ ಆನು ಲಾಯ್ಕಲಿ ಡ್ಯಾನ್ಸ್ ಮಾಡಿದ್ದಿಲ್ಲೆ ಹೇಳಿ ನಿರಾಶೆ ಅಪ್ಪಗಳೇ ಕೆಲವೊಂದಷ್ಟು ಜನ ಶಾಸ್ತ್ರಕ್ಕೆ ಹೇಳಿದಾಂಗೆ “ನಿಂಗಳ ಡ್ಯಾನ್ಸ್ ಕೂಡ ಚೆಂದ ಇತ್ತು ಸುಪ್ರಿಯಾ” ಹೇಳಿ ಹೊಗಳಿದವು. ಇದು ಬರೀ ಬಾಯಿಮಾತಿಂಗೆ ಹೇಳಿದ್ದು ಹೇಳಿ ಅಂದುಕೊಂಡತು ಸುಪ್ರಿಯಾ. ಎನ್ನ ನೃತ್ಯ ಹೇಂಗಿತ್ತು ಹೇಳಿ ಸರಿಯಾಗಿ ಎನ್ನ ಗೆಂಡ ಹೇಳ್ತ, ಅವನತ್ರವೇ ಕೇಳುದು ಒಳ್ಳೇದು ಹೇಳಿ ರೆಕಾರ್ಡ್ ಮಾಡಿದ್ದ ವೀಡಿಯೋವ ಮನೆಗೆ ತೆಕ್ಕೊಂಡು ಹೋದತು. “ನೋಡು ಒಪ್ಪಕ್ಕ, ನೀನು ನೃತ್ಯವ ಲಾಯ್ಕಲಿ ಮಾಡಿದ್ದೆ. ಆದರೆ ನೀನೇ ನೋಡು ಈ ವೀಡಿಯೋಲಿ, ಉಳುದವು ಹೇಂಗೆ ಉತ್ಸಾಹಲಿ, ಅವ್ವೆ ಆನಂದಿಸಿಗೊಂಡು ಮಾಡಿದ್ದವು. ಆದರೆ ನಿನ್ನ ಮೋರೆಲಿ ಹೆದರಿಕೆ ಸೇರ್ಕೊಂಡ ಭಾವವಿದ್ದು. ಇರ್ಲಿ ಬಿಡು, ಇನ್ನೊಂದ್ಸರಿ ಇನ್ನೂ ಲಾಯ್ಕಲಿ ಮಾಡಿದರಾತು. ನೀನು ಇಷ್ಟು ಮಾಡಿದ್ದೇ ಭಯಂಕರ ಖುಷಿ ಎನಗೆ” ಹೇಳಿ ಸಮಾಧಾನ ಮಾಡಿದ. ಗೆಂಡ ಹೀಂಗೆ ವಿವರವಾಗಿ ತಪ್ಪಿನ ಒಪ್ಪವಾಗಿ ಹೇಳಿದ ಮೇಲೆ, ಸುಪ್ರಿಯಾ ಅದರ ನೃತ್ಯವ ಅವಲೋಕಿಸಿತು. ಅಪ್ಪು ಅವ ಹೇಳಿದ್ದು ಸತ್ಯ ಹೇಳಿ ಮನದಟ್ಟಾತು.

ಹೀಂಗೆ ದಿನಂಗ ಉರುಳಿಗೊಂಡಿತ್ತು, ಆ ದಿನದ ಬೇಜಾರು ಕಮ್ಮಿಯಾತು. ಮತ್ತೊಂದು ವರುಷ ಕಳುದತು, ಈ ವರ್ಷ ಕೂಡ ನೃತ್ಯ ಇದ್ದು ಹೇಳಿ ಪ್ರಕಟಣೆ ಬಂತು. ಕಳೆದ ಸರ್ತಿಯ ಭಾಗವಹಿಸುವಿಕೆ ಸ್ಟೇಜ್ ಫಿಯರ್ ಕಮ್ಮಿ ಮಾಡಿತ್ತು ಸುಪ್ರಿಯಾನಲ್ಲಿ. ಈ ಸರ್ತಿಯೂ ರಿಜಿಸ್ಟರ್ ಮಾಡಿಗೊಂಡು, ಹೋದ ಸರ್ತಿಗಿಂತಲೂ ಲಾಯ್ಕಲಿ ಅಭ್ಯಾಸ ಮಾಡಿತು. ಅದರ ಮತ್ತಷ್ಟು ಹುರಿದುಂಬಿಸಿದವು ಅದರ ಗೆಂಡ ಮತ್ತೆ ಅದರ ಫ್ರೆಂಡ್ ಅನು. ಎನ್ನಂದಲೂ ಸಾಧ್ಯ, ಶಭಾಷ್ ಹೇಳಿಸಿಕೊಂಬಾಂಗೆ ನೃತ್ಯ ಮಾಡಿಯೇ ಮಾಡ್ತೆ ಹೇಳಿ ಪಣತೊಟ್ಟತು. ಈ ಸಲ ಅದರ ತಂಡಲಿ ಕನ್ನಡಿಗರು ಜಾಸ್ತಿಯಿದ್ದ ಕಾರಣ ಕೆಲವು ಕನ್ನಡ ಹಾಡುಗವೊಕ್ಕೆ ಕೂಡ ಹೆಜ್ಜೆ ಹಾಕುಲಿದ್ದು ಹೇಳಿ ನಿರ್ಧರಿಸಿತ್ತವು. ಕನ್ನಡ ಪದ್ಯಂಗಳ ಸಾಹಿತ್ಯ ಗೊಂತಿದ್ದ ಸುಪ್ರಿಯಾಂಗೆ ಇದರಿಂದ ಆನೆಬಲ ಬಂದಾಂಗೆ ಆಗಿತ್ತು.

ಸುಪ್ರಿಯಾ ಕಾತುರಂದ ಎದುರು ನೋಡಿಗೊಂಡಿತ್ತಿದ್ದ ದಿನ ಬಂತು. ಅದರ ತಂಡವ ಕಾರ್ಯಕ್ರಮದ ನಿರೂಪಕರು ವೇದಿಕೆಗೆ ದಿನಿಯೇಳಿದವು. ಹಿನ್ನಲೆಲಿ ಪದ್ಯ ಕೇಳುಲೆ ಶುರುವಾದಾಂಗೆ ಸುಪ್ರಿಯಾ ಅದರೆದುರು ಆರೂ ಇಲ್ಲೆ ಹೇಳಿ ಗ್ರೇಶಿ ಹೆಜ್ಜೆಗಳ ಹಾಕಿತು. ಪದ್ಯ ಬದಲಾಕ್ಕೊಂಡು ಇತ್ತು, ಪದ್ಯಕ್ಕೆ ಸರಿಯಾಗಿ ಸುಪ್ರಿಯಾನ ಹೆಜ್ಜೆಗ ಬದಲಾವುತ್ತಾ ಇದ್ದು. ಆರನ್ನೂ ಲೆಕ್ಕಕ್ಕೆ ತೆಕ್ಕೊಳ್ಳದೆ ನೃತ್ಯ ಮಾಡ್ತಾ ಇದ್ದು ಸುಪ್ರಿಯಾ! ಅದರ ತಂಡದ ಅಕೇರಿಯಣ ಹಾಡಿಂಗೆ ಕೂಡ ನೃತ್ಯ ಮುಗುದತು. ಅಲ್ಲಿ ತನಕ ಬಿಡದೇ ಹೆಜ್ಜೆ ಹಾಕಿದ ಅದರ ಕಾಲಿಂಗೆ ಸುಸ್ತಾವುತ್ತಾ ಇದ್ದು. ಅದರ ಮನಸ್ಸು “ಯಸ್ ಐ ಡಿಡ್ ಇಟ್!!” ಹೇಳಿ ಉದ್ಘಾರ ತೆಗೆದರೆ, ಕೆಳ ಕೂದ ಸಭಿಕರೆಲ್ಲೋರು ಜೋರಾಗಿ ಚಪ್ಪಾಳೆ, ಶಿಳ್ಳೆ ಹೊಡೆತ್ತಾ ಇದ್ದವು. ಅದರ ಕೆಮಿಲಿನ್ನೂ ಕರತಾಡನದ ಶಬ್ದ, “ವಾಹ್ ಸುಪ್ರಿಯಾ, ತುಂಬಾ ಚೆಂದಕೆ ಡ್ಯಾನ್ಸ್ ಮಾಡಿದೆ, ನಿನ್ನ ನೆಗೆ, ಹಾವ, ಭಾವ ನೋಡ್ಲೆ ಖುಷಿ ಆಕ್ಕೊಂಡು ಇತ್ತಿದ್ದು, ನೀನಿಷ್ಟು ಲಾಯ್ಕಲಿ ಡ್ಯಾನ್ಸ್ ಮಾಡ್ತೆ ಹೇಳಿ ಗೊಂತಿತ್ತಿಲ್ಲೆ!” ಹೇಳಿ ಅದರ ಕೊಲೀಗ್ಸ್ ಎಲ್ಲ ಡೆಸ್ಕ್ ಹತ್ರ ಬಂದು ಅಭಿನಂದಿಸಿದವು. ಈ ಸಲದ್ದು ಅವರದ್ದೆಲ್ಲ ಪ್ರಾಮಾಣಿಕವಾದ ಹೊಗಳಿಕೆ ಹೇಳಿ ಗೊಂತಾತು ಸುಪ್ರಿಯಾಂಗೆ. ಸುಮಾರು ಹೊಗಳಿಕೆಗ ಬಂದರುದೇ ಅದರಿಂದ ಉಬ್ಬಿ ಹೋಯಿದಿಲ್ಲೆ ಈ ಒಪ್ಪಕ್ಕ, ಬದಲಿಂಗೆ “ಮನಸ್ಸು ಮಾಡಿದರೆ ಎಂತ ಬೇಕಾದರೂ ಸಾಧಿಸುಲಕ್ಕು” ಎಂಬ ಮಾತಿನ ನೆನಪು ಮಾಡಿಗೊಂಡತು. ಅದರ ಛಲ ಅದರ ಕೈಬಿಟ್ಟಿದ್ದಿಲ್ಲೆ. ಸುಪ್ರಿಯಾನ ಮೋರೆ ಮಂದಹಾಸಂದ ಮಿನುಗಿಗೊಂಡಿತ್ತು.

10 COMMENTS

  1. ಓದೋಕೆ ತುಂಬಾ ಪ್ರಯತ್ನ ಪಟ್ಟೆ, ತುಂಬಾ ಕಷ್ಟ ಆಯ್ತು….

  2. ತುಂಬಾ ಚಂದ ಆಯ್ದು ಬರ್ದಿದ್ದು ಮಾರ್ರೆ… ಓದಿ ತುಂಬಾ ಖುಷಿ ಆಯ್ತು! ಭಾಷೆಯ ಮೇಲಿನ ನಿಮ್ಮ ಹಿಡಿತ, ವಿಷಯ, ವಿವರಣೆ, ವ್ಯಾಕರಣ ಎಲ್ಲ ಚಂದ ಚಂದ 👌👍

LEAVE A REPLY

Please enter your comment!
Please enter your name here