ಆನು, ಡಿಗ್ರಿ ಫೈನಲಿಯರಿಲಿ ಇಪ್ಪಗಳೇ ಈ ಕೊರೊನಾ ರೋಗ ಒಂದು ಬಂದು ಎಂಗೊ ಪಟ್ಟ ಫಜೀತಿಯ ಇಂದು ನಮ್ಮ ಹುಳಿಮೇಲಾರದ ಬಳಗದೊಟ್ಟಿಂಗೆ ಹಂಚಿಗೊಂಬ ಹೇಳಿ ಗ್ರೇಶಿದೆ.
ಎಂತ ಹೇಳಿರೆ,
ಅದು ಶೈಕ್ಷಣಿಕ ವರ್ಷ 2019-20! ಆನು ತೃತೀಯ ಬಿ.ಕಾಂ ಪದವಿ ವಿದ್ಯಾರ್ಥಿಯಾಗಿ ನಮ್ಮ ಮಂಗ್ಳೂರಿನ ಭಾರತೀ ಕಾಲೇಜಿಲಿ ಕಲ್ತುಗೊಂಡಿತ್ತಿದೆ. ಅಷ್ಟ್ರ ವರೇಗೆ ಡಿಗ್ರಿಯೂ, ಹಾಸ್ಟೆಲ್ ಲೈಫೂ, ಎಲ್ಲೋರ ಹಾಂಗೆ ಓದಿಯೊಂಡು, ಎಂಗಳದ್ದೇ ‘ಹವ್ಯಕ ಗ್ಯಾಂಗ್’ ಹೇಳಿ ಕಟ್ಯೊಂಡು, ಲಾಗ ಹಾಯ್ಕೊಂಡು, ಗಮ್ಮತ್ತು ಮಾಡ್ಯೊಂಡು ಕಳದಿತ್ತೆಯ°..
ಐದನೇ ಸೆಮಿಸ್ಟರ್ ಚೂರು ನಿಧಾನಕ್ಕೆ ಮುಗಿದರೂ, ಆರನೇ ಸೆಮಿಸ್ಟರ್ ಲಿ ದಿನ ಹೋಪದೇ ಗೊಂತಾಗ..
ಸಾಂಸ್ಕೃತಿಕ ದಿನಾಚರಣೆ, ಸ್ಪೋರ್ಟ್ಸ್ ಡೇ, ಕಾಲೇಜು ವಾರ್ಷಿಕೋತ್ಸವ, ಆ ದಿನ, ಈ ದಿನ, ಹೇಳಿ ಸಂಭ್ರಮವೇ ಸಂಭ್ರಮ.ಲಾಸ್ಟಿಂಗೊಂದು “send off” ಇದ್ದನ್ನೇ.. ಅದಕ್ಕೆ ಬೇಕಾಗಿ ಸುಮಾರು ದಿನಂದ ಕಾದು ಕೂದುಗೊಂಡು, ಮನಸ್ಸಿಲಿಯೇ ಭಾಷಣ ಮಾಡುಲೆಲ್ಲ ತಯಾರಿ ನಡೆಶಿಗೊಂಡಿತ್ತೆ.. (ಅಲ್ಲದ್ದರೆ ಭಾಷಣ ಮಾಡು ಹೇಳಿರೆ ದೂರ ಹೋಪ ಜೆನ ಆನು, ಆದರೆ send off ಭಾಷಣಕ್ಕೆ ಮಾತ್ರ ಭಯಂಕರ ತಯಾರಿ ಮಾಡ್ಯೊಂಡಿತ್ತೆ! ಕಾಲೇಜು ಲೈಫು ಪುನಃ ಬತ್ತಿಲ್ಲೆನ್ನೆ!)
ಇನ್ನು ಎರಡೇ ತಿಂಗಳು… ಪದವಿ ಕೊನೆಯ ಸೆಮಿಸ್ಟರ್ ಪರೀಕ್ಷೆ ಹತ್ತರೆ ಬಂದುಗೊಂಡಿತ್ತು..! ಪಾಠವನ್ನೂ ಓಡ್ಸಿಗೊಂಡಿತ್ತವು, ಒಟ್ಟಿಂಗೆ ಎಸೈನುಮೆಂಟುಗೋ ಕಂಡಾವಟ್ಟೆ..
ಮಾರ್ಚ್ 16 ರಿಂದ 18 ರವರೆಗೆ internals ಹೇಳಿ ಟೈಮ್ ಟೇಬುಲುದೆ ಬಂದಾಗಿತ್ತು.
ಮಾರ್ಚ್ 13, ಶುಕ್ರವಾರ ಇರುಳು! ಕಾಲೇಜಿಂದ ಬಂದು ತಿಂಡಿ ತಿಂದು, ಮಿಂದು, ವಸ್ತ್ರ ಒಗದೆಲ್ಲ ಆಗಿ, ಹಾಸ್ಟೆಲಿಲಿ ರೂಮ್-ಮೇಟುಗಳೊಟ್ಟಿಂಗೆ ಪಟ್ಟಾಂಗ ಹೊಡಕ್ಕೊಂಡು ಕೂದುಗೊಂಡು ಮೊಬೈಲಿನತ್ರೆ ಕಣ್ಣಾಡ್ಸಿಯಪ್ಪಗ.. ಒಂದು circular ಬಂದಿತ್ತು! ಚೀನಂದ ಬಂದ ಹೊಸ ಸಾಂಕ್ರಾಮಿಕ ರೋಗವ ತಡೆಗಟ್ಟುವ ಸಲುವಾಗಿ ರಾಜ್ಯ ಸರ್ಕಾರ March 14 ರಿಂದ 21 ರವರೆಗೆ ಒಂದು ವಾರದ ರಜೆ ಘೋಷಿಸಿತ್ತು. ಆವಗ, ಇಂಟರ್ನಲ್ ಪರೀಕ್ಷೆ ಮುಂದೆ ಹೋತು, ಗ್ರೇಶದ್ದೆ ಒಂದು ವಾರ ರಜ ಸಿಕ್ಕಿತ್ತೂಳಿ ಖುಷಿಯೋ ಖುಷಿ!
ಒಂದು ವಾರದ ರಜೆ ಆದ ಕಾರಣ, 14 ಕ್ಕೆ ಉದಿಯಪ್ಪಗಳೇ ಎಲ್ಲ ಬೇಕಪ್ಪ ವಸ್ತುಗಳ ಎರಡು ಬ್ಯಾಗುಗಳಲ್ಲಿ ತುಂಬ್ಸಿ ಮನೆಗೆ ಬಂದೆ. ತಮ್ಮಂಗೂ ರಜೆ. ಸುರುಸುರುವಿಂಗೆ ಕಾಲೇಜು ಪುನರಾರಂಭ ಆದ ಕೂಡ್ಲೆ ಪರೀಕ್ಷೆ ಮಾಡ್ತವು ಹೇಳುವ ಸಣ್ಣ ಹೆದರಿಕೆಲಿ ಚೂರು ಚೂರು ಪುಸ್ತಕ ತಿರುಗ್ಸಿಕೊಂಡು, assignment ಬರಕ್ಕೊಂಡು, ಮತ್ತೆ ಚೂರು ಕಾಲಹರಣ ಮಾಡ್ಯೊಂಡು ಲಾಯ್ಕಲ್ಲಿ ಕಳದೆಯ. ಚೂರು ದಿನಲ್ಲಿ ಲಾಕ್’ಡೌನ್ announce ಆಗಿ ಬಿಟ್ಟತ್ತು. ಒಂದೆಡೇಲಿ ರಜೆಯ ಖುಷಿ, ಇನ್ನೊಂದೆಡೆಲಿ ಹೊತ್ತುಹೋಯ್ಕನ್ನೇ ಹೇಳುವ ತಲೆಬೆಷಿ!! ಅಂತೂ ಲೂಡೋ ಆಡಿಗೊಂಡು, ಕಿಚನ್ ಲಿ ಹೊಸ ಹೊಸ ಪ್ರಯೋಗಂಗಳ ಮಾಡಿಗೊಂಡು, ಸಿನಿಮಾ ನೋಡಿಗೊಂಡು, ಮತ್ತೆ ಎಲ್ಲೋರಿಂಗೆ ಉದಾಸನ ಆಗಿ ಮಾಡ್ಲೆಂತ ಉದ್ಯೋಗ ಇಲ್ಲದ್ದೆ ವೈರಲ್ ಮಾಡಿದ ಅರ್ಥ ಇಲ್ಲದ್ದ, ಕೆಲವು ಹಾಸ್ಯಪ್ರಧಾನ ವೀಡೀಯೋಂಗಳ ನೋಡಿ ನಾವೂ ಎಂಜಾಯ್ ಮಾಡಿಗೊಂಡು ತಿಂಗಳುಗಳ ದೂಡಿಗೊಂಡಿತ್ತೆಯ! ಕೆಲವು ಒಳ್ಳೊಳ್ಳೆ ಪುಸ್ತಕಂಗಳನ್ನೂ ಮೊಬೈಲಿಲಿಯೇ ಓದಿ ಮುಗಿಶಿದೆ. ಆದರೆ, ಎಂಗಳ ಮೇಲೆ ಆರ ಕೆಟ್ಟಕಣ್ಣು ಬಿದ್ದತ್ತಾ ಎಂತಾ!!
ನಿಧಾನಕ್ಕೆ “ಫೈನಲ್ ಇಯರಿನವಕ್ಕೆ ಪರೀಕ್ಷೆ ಮಾಡ್ತವಡ” ಹೇಳಿ ಸುದ್ದಿ ಬಪ್ಪಲೆ ಸುರುವಾತು.. ತಿಂಗಳಾನುಗಟ್ಲೆ ಬಿಡ್ಸದ್ದೆ ದೂಳುಹಿಡಿವಲಾದ ಪುಸ್ತಕಂಗಳ ಓದುಲೆ ಸುರುಮಾಡೆಕ್ಕನ್ನೇ ಇನ್ನು ಹೇಳುವ ತಲೆಬೆಷಿ ಒಂದೆಡೆಲಿ! ಪಾಠ ಕಂಪ್ಲೀಟ್ ಆಗದ್ದ ತಲೆಬೆಷಿ ಇನ್ನೊಂದೆಡೆಲಿ! ಎಂಗಳ ಕಷ್ಟವ ಆರತ್ರೆ ಹೇಳುದು? ಈ ಕೊರೊನಾ ಎಂಗ final year ಲಿ ಇಪ್ಪಗಳೇ ಬರೆಕ್ಕಿತ್ತಾ ಗ್ರಾಚಾರದ್ದು!! ಇನ್ನೆರಡು ತಿಂಗಳು ಕಾವಲೆ ಎಂತ ಸಂಕಟ ಇತ್ತು ಇದಕ್ಕೆ, ಎಂಗೊಗೆ ಉಪದ್ರ ಕೊಡುಲೇಳಿಯೇ ಹುಟ್ಟಿಗೊಂಡ ರೋಗ ಒಂದು, ‘ಖರ್ಮ’ ಹೇಳಿ ಎಂಗಳ ಹಣೆಬರಹಕ್ಕೆ ಹೊಣೆ ಕೊರೊನಾ ಹೇಳಿಗೊಂಡು ಅದಕ್ಕೆ ಶಾಪ ಹಾಕುಲೆ ಸುರು ಮಾಡಿದೆಯ. ಶಾಪ ಹಾಕಿಗೊಂಡು ಕೂದರೆ ಪರೀಕ್ಷೆ ಕ್ಯಾನ್ಸಲ್ ಆವ್ತಿಲ್ಲೆನ್ನೆ!

ಹ್ಞಾಂ! ಚೂರು ದಿನಲ್ಲಿ ಓನ್’ಲೈನ್ ಕ್ಲಾಸುಗಳೂ ಸುರುವಾತು. ಉದಿಯಪ್ಪಗ ಎದ್ದಕೂಡ್ಲೆ ವಾಟ್ಸಪ್ಪಿಲಿ ಮೆಸೇಜು ‘ಕ್ಲಾಸೀಗ ಸುರುವಾಯ್ತು, ಬೇಗ join ಆಗಿ’ ಹೇಳಿ. ಆದ ಪಾಠಂಗ ಎಲ್ಲ ಮರತ್ತು ಹೋಗಿ, ಆನ್ಲೈನ್ ಕ್ಲಾಸು ಅರ್ಧಂಬರ್ಧ ಅರ್ಥ ಆಗಿ, ಎಂಗಳ ತಲೆ ಇಡೀ ಕಲಸು-ಮೇಲೋಗರ! ಅಂತೂ ಇಂತೂ ಆನ್ಲೈನ್ ಕ್ಲಾಸುಗೊ ಮುಗುದು, ಕೊರೊನಾ ನೆಪಲ್ಲಿ ಫೈನಲ್ ಇಯರಿನವಕ್ಕೆ ಮಾತ್ರ ಪರೀಕ್ಷೆ ಹೇಳಿಯೂ ಆದ ಕಾರಣ ಪರೀಕ್ಷೆಯೂ ಸುಲಭ ಇಕ್ಕೂಳಿ ಗ್ರೇಶಿಗೊಂಡು ಬರೀ important concept ಗಳ ಮಾತ್ರ ಓದಿಗೊಂಡು ಹೋಗಿ ಆಫ್ಲೈನ್ ಪರೀಕ್ಷೆಗೊಕ್ಕೆ ಹಾಜರಾದೆಯ. ಪ್ರಶ್ನೆಪತ್ರಿಕೆ ತಯಾರಕರೋ, ಅವಕ್ಕೆ ಬೇಕಾದಷ್ಟು ಸಮಯ ಇದ್ದ ಕಾರಣ, ಮಕ್ಕಳೂ ಲಾಕ್’ಡೌನ್ ಲಿ ಬೇಕಾದಷ್ಟು ಓದಿಕ್ಕು ಹೇಳಿ ಗ್ರೇಶಿಗೊಂಡು ಪೇಪರ್ ತಯಾರು ಮಾಡಿತ್ತವು ಕಾಣ್ತು; ಎಂಗಳ ಪರಿಸ್ಥಿತಿ ಆರಿಂಗೂ ಬೇಡ!!
ಅತ್ಲಗಿ send off ದೆ ಇಲ್ಲೆ, ಇತ್ಲಗಿ ಪರೀಕ್ಷೆಯೂ ಟುಸ್’ಪಟಾಕಿ! ಇದೆಲ್ಲದರ ಎಡೆಲಿ ಎಂಗಳ ಜೂನಿಯರುಗೊ ಎಲ್ಲ ಪರೀಕ್ಷೆ ಬರೆಯದ್ದೆ ಪಾಸಾಗಿ ಎಂಗೊ ಫೈನಲ್ ಇಯರ್ ಪಾಸಪ್ಪಂದ ಮೊದಲೇ ಅವ್ವುದೆ ಫೈನಲ್ ಇಯರಿಂಗೆ ಎತ್ತಿ ಆಗಿತ್ತು!! ಅಂತೂ ಪರೀಕ್ಷೆ ಬರದಾತು. ಇನ್ನು ರಿಸಲ್ಟ್ ದೇವರಿಂಗೇ ಪ್ರೀತಿ ಹೇಳಿಗೊಂಡು ಪುನಃ ಇದಕ್ಕೆಲ್ಲ ಮೂಲ ಕಾರಣ ಆದ ಕೊರೊನಾಕ್ಕೇ ಪುನಃ ಶಾಪ ಹಾಕಿ, ರಿಸಲ್ಟಿಂಗೆ ಕಾದೆಯ. ಕೊನೆಗೂ ಡಿಸ್ಟಿಂಕ್ಷನ್ ಲಿ ಪಾಸಾಗಿ ಆತು, ಅಲ್ಲಲ್ಲ ದೊಡ್ಡ ಕಷ್ಟಂದ ಪಾರಾಗಿ ಆತು!
ಆ ಸಮಯಕ್ಕೆ, ಎಂಗಳ ಗ್ರಾಚಾರಕ್ಕೆ ಈಗಳೇ ಹೀಂಗೆಲ್ಲ ಆಯೆಕ್ಕಿತ್ತಾ ಹೇಳಿ ಅನ್ಸಿದರೂ, ಈಗ ಮಾತ್ರ, ‘ಅಬ್ಬ ಬಚಾವಾದೆಯ’ ಹೇಳಿ ಆವ್ತು.
ಎಂಗಳ ಜೂನಿಯರ್’ಗಳ ನೋಡುವಗ ಪಾಪ ಕಾಣ್ತು. ಅರ್ಧ ವರ್ಷ ಹೋದ್ದೇ ಗೊಂತಾಯ್ದಿಲ್ಲೆ, ಇನ್ನು ರಜ್ಜ ತಿಂಗಳು ಆನ್ಲೈನ್ ಕ್ಲಾಸುಗೋ, ಇನ್ನು ರಜ್ಜ ತಿಂಗಳು ಆಫ್’ಲೈನು. ಒಟ್ರಾಸಿ ಸಜ್ಜಿಗೆ ಬಜಿಲು!
ಆದರೆ, ಕೊಟ್ಟಕೊನೆಗೆ ನೋಡ್ತರೆ, ಎಂತ ಮಾಡುದು? ಬೇರೆ ನಿರ್ವಾಹವೇ ಇಲ್ಲೆ. ಇಡೀ ಪ್ರಪಂಚಲ್ಲಿ ಎಲ್ಲೋರಿಂಗೂ ಬಂದು ಬಡುದ ಈ ಕಷ್ಟಕ್ಕೆ ಹೊಣೆ ಆರು? ಅತೀ ಹೆಚ್ಚು ತೊಂದರೆಯಾದ ಕ್ಷೇತ್ರಂಗಳಲ್ಲಿ ಈ ಶಿಕ್ಷಣ ಕ್ಷೇತ್ರವೂ ಒಂದು. ಆದರೆ ಅದಷ್ಟೋ ಒಳ್ಳೆಯ ವಿಷಯಂಗಳೂ ಈ ಸಮಯಲ್ಲಿ ಅನುಭವಕ್ಕೆ ಬೈಂದು. ಎನ್ನ ಜೀವನಲ್ಲಿ ಹಾಂಗಿಪ್ಪ ಯಾವೆಲ್ಲ ಘಟನೆಗೊ ಆಯ್ದು ಹೇಳಿ ಇನ್ನಾಣ ಸರ್ತಿ ಹೇಳ್ತೆ ಆತಾ..
ಬತ್ತೆ ಅಂಬಗ… ಕಾಂಬ…
ಲಾಯ್ಕಿದ್ದು ಲೇಖನ😍