ಈ ವರ್ಷ, ೨೦೨೦, ಇಡೀ ಜಗತ್ತಿಲ್ಲಿ ಎಲ್ಲರೂ ನೆಂಪು ಮಡಿಕ್ಕೊಂಬ ಹಾಂಗಿದ್ದ ವರ್ಷ. ಕಾರಣ ಹೇಳೆಕಾಗಿಯೇ ಇಲ್ಲೆ! ವೈಯಕ್ತಿಕವಾಗಿ, ಕೌಟುಂಬಿಕವಾಗಿ, ಸಾಮಾಜಿಕವಾಗಿ, ಆರ್ಥಿಕವಾಗಿ, ರಾಜಕೀಯವಾಗಿ… ಹೀಂಗೆ ಎಲ್ಲ ರೀತಿಂದಲೂ ತುಂಬ ಏರುಪೇರುಗಳ, ಬದಲಾವಣೆಗಳ ನಾವು ಕಂಡಿದು. ಒಂದು ಗ್ಲಾಸು ಕಾಪಿಯೂ ಮಾಡ್ಲೆ ಅರಡಿಯದ್ದವು ಲಾಯ್ಕ ಅಡಿಗೆ ಮಾಡ್ಲೆ ಕಲ್ತಿದವು. ಮಕ್ಕೊ ಮನೆಕೆಲಸ ಮಾಡ್ಲೆ ಕಲ್ತಿದವು. ಹಲವು ಕುಟುಂಬಲ್ಲಿ ಸಮಯ ಸಿಕ್ಕದ್ದೇ ಪರಸ್ಪರ ದೂರ ಆದ ಸಂಬಂಧಂಗ ಹತ್ತರೆ ಆಯ್ದು. ಕೆಲವು ಕುಟುಂಬಲ್ಲಿ ಅನಿವಾರ್ಯವಾಗಿ ಪರಸ್ಪರ ಸಹಿಸೆಕಾಗಿ ಬಂದಕಾರಣ ಕೌಟುಂಬಿಕ ಸ್ವಾಸ್ಥ್ಯವೂ, ಒಟ್ಟಿಂಗೇ ವ್ಯಕ್ತಿಗಳ ಮಾನಸಿಕ ಸ್ವಾಸ್ಥ್ಯವೂ ಹಾಳಾದ್ದೂ ಇದ್ದು. ಒಬ್ಬೊಬ್ಬನೇ ಬದುಕ್ಕುತ್ತಾ ಇತ್ತಿದ್ದವಕ್ಕೆ ಮಾನಸಿಕ ಸಮಸ್ಯೆಯೂ ಕಾಡಿದ್ದು. ಇನ್ನು ಸುಮ್ಮನೇ ಕೂರದ್ದೆ ಆ ಕೋರ್ಸು ಈ ಕೋರ್ಸು ಹೇಳಿ ಕಲಿತ್ತ ಆಸಕ್ತಿ ಇಪ್ಪೋರಿಂಗೆ ಆನ್ಲೈನಿಲ್ಲಿ ನೂರಾರು ಕೋರ್ಸುಗಳೂ ಸಿಕ್ಕಿ ಭಾರೀ ಉಪಕಾರ ಆಯ್ದು.
ಈ ಎಲ್ಲದರ ಮಧ್ಯೆ ದೊಡ್ಡ ಸಮಸ್ಯೆ ಆಗಿ ಉಳುದ್ದು ಮಕ್ಕಳ ಶಾಲೆಯ ವಿಷಯ. ಶಾಲೆ ಬೇಡ ಹೇಳಿ ಹಟ ಮಾಡುವ ಮಕ್ಕಗೂ ಈಗ ಒಂದರಿ ಶಾಲೆಗೆ ಹೋಯಕು ಹೇಳಿ ಕಾಂಬಲೆ ಶುರು ಆಯ್ದು. ಎಲ್ಲ ಶಾಲೆಗಳೂ ಆನ್ಲೈನಿಲ್ಲಿಯೇ ಪಾಠ ಶುರು ಮಾಡಿದ್ದವು. ಶಾಲೆಲಿ ಟೀಚರ್ಗ ಬಂದುಗೊಂಡಿತ್ತ ಬಂಙ ಎಂತರ ಹೇಳಿ ಎಲ್ಲ ಅಮ್ಮ-ಅಪ್ಪಂದ್ರಿಂಗೂ ಅರ್ಥ ಆವ್ತಾ ಇದ್ದು. ಮಕ್ಕಳ ನೋಡಿಗೊಂಬ ಕೆಲಸ, ಇಡೀ ದಿನ ಅವ್ವು ಎಂತಾರೊಂದು ಕೆಲಸಲ್ಲಿ-ಕಲಿವದರಲ್ಲಿ busy ಇಪ್ಪಹಾಂಗೆ ಮಾಡುದರಷ್ಟು ದೊಡ್ಡ ಕೆಲಸ ಬೇರೆ ಇಲ್ಲೆ. ಮರುದಿನ ಉದಿಯಪ್ಪಗ ಕಾಪಿಗೆಂತಕ್ಕು ಹೇಳಿ ತೀರ್ಮಾನ ಮಾಡುದಾದರೂ ಅಷ್ಟು ಬಂಙ ಇಲ್ಲೆಪ್ಪಾ ಹೇಳಿ ಕೆಲಾವು ಜನ ಅಮ್ಮಂದ್ರು ಗ್ರೇಶಿಕ್ಕು.
ಈಗಾಣದ್ದು ವಿಶೇಷ ಸಂದರ್ಭ. ಮಕ್ಕ ಹೆರ ಹೋಪಲಿಲ್ಲೆ. ಶಾಲೆಗೂ ಹೋಪಲಿಲ್ಲೆ. ಆನ್ಲೈನ್ ಪಾಠಂಗ. ಅದು ಬಿಟ್ಟರೆ ಮಕ್ಕ ಟಿವಿ ನೋಡುದಾ, ಫೋನೋ ಕಂಪ್ಯೂಟರ್ ಗುರುಟುದಾ, ಎಂತಾರು ಓದುದಾ, ಆಡುದಾ ಮಾಡುಗು. ಮತ್ತೆ ರಜ್ಜ ಉದಾಸೀನ ಆವ್ತು ಹೇಳುಗು. ಲೂಟಿಯೂ ಮಾಡುಗು. ದೊಡ್ಡೋರ ಕೈಲಿ ನಾಲ್ಕು ಪೆಟ್ಟೂ ತಿಂಗು. ಆರೆಂಟು ತಿಂಗಳು ಮಕ್ಕ ಮನೆಲೇ ಇಪ್ಪದು ಹೇಳುವ ಸಂದರ್ಭ ಈ ಮೊದಲು ಯಾವತ್ತೂ ಬಂದದಿರ. ಕುಶಾಲು ಬೇರೆ. ಆದರೆ ಈಗ ಮಕ್ಕ ಮನೆಲಿಪ್ಪದರಿಂದ ನಿಜವಾಗಿಯೂ ಎಂತ ಸಮಸ್ಯೆ ಆಯ್ದು ಹೇಳಿ ಗಮನಿಸೆಕ್ಕು. ಪರಿಹಾರ ಹುಡ್ಕೆಕು. ಅದೂ ಅಲ್ಲದ್ದೆ ಇದು ಮಕ್ಕಳ ಸಮಸ್ಯೆ ಹೇಳಿ ನಾವು ಲೇಬಲ್ ಮಾಡ್ತರೂ ಕೂಡ ಇದು ಮುಖ್ಯವಾಗಿ ದೊಡ್ಡವರದ್ದೇ ಸಮಸ್ಯೆ ಅಲ್ಲದಾ?
ಈ ಸಮಸ್ಯೆಗೊಕ್ಕೆ ಪರಿಹಾರ ಸಿಕ್ಕ್ದ್ದರೆ ಅದಾ ಪರಿಣಾಮ ದೊಡ್ಡೋರ ಮೇಲೂ ಮಕ್ಕಳ ಮೇಲೂ, ಅಥವಾ ಒಟ್ಟಾಗಿ ಕುಟುಂಬದ ಮೇಲೂ ಸಮಾಜದ ಮೇಲೂ ಆವ್ತು ಹೇಳುದರ ನಾವು ಅರ್ಥ ಮಾಡಿಗೊಳ್ಳೆಕಾವ್ತು.
- ಶಾಲೆಯ ಪಾಠ ಮನೆಲೇ ಅಪ್ಪ ಕಾರಣಂದ ರಜ್ಜ ಕಟ್ಟುನಿಟ್ಟಿನ ಹಿಡಿತ ಇಲ್ಲದ್ದೆ ಅಪ್ಪ ಸಾಧ್ಯತೆ ಇದ್ದು. ಎಷ್ಟಾದರೂ ಅಮ್ಮ-ಅಪ್ಪ ಹೇಳುವಗ ಟೀಚರ್ಗಳ ಕಂಟ್ರೋಲಿಲ್ಲಿ ಇಪ್ಪ ಹಾಂಗೆ ಆವ್ತಿಲ್ಲೆ. ಮಕ್ಕಳ ಬಗ್ಗೆ ಪ್ರೀತಿ ಸಹಜವೇ ಆದರೆ ಅದು ಅವಕ್ಕೇ ಸಮಸ್ಯೆ ಅಪ್ಪಲಾಗನ್ನೆ. ಹಾಂಗಾಗಿ ಅಮ್ಮ-ಅಪ್ಪ ರಜ್ಜ ಹೆಚ್ಚು strict ಆಗಿಯೇ ಇರೆಕಾವ್ತು. ಆದರೆ ಅದು ಎಲ್ಲಿ ಬೇಕೋ ಅಲ್ಲಿ, ಎಷ್ಟು ಬೇಕೋ ಅಷ್ಟು ಮಾಂತ್ರ.
- ಅಮ್ಮ-ಅಪ್ಪಂದ್ರೂ ಮಕ್ಕಳ ಪಾಠಂಗಳಲ್ಲಿ ಅಗತ್ಯಂದ ಹೆಚ್ಚಿಗೆ ಮೂಗು ತೂರ್ಸುವ ಸಂದರ್ಭ ಇದ್ದು. ಇದು ಇಡೀ ಜಗತ್ತಿಲ್ಲಿ ಆವ್ತಾ ಇಪ್ಪ ಸಮಸ್ಯೆ! ಮಕ್ಕೊಗೆ ಪಾಠ ಕೇಳುಲೆ, ನೋಡುಲೆ ಬೇಕಾದ ವ್ಯವಸ್ಥೆ ಮಾಡಿಕೊಟ್ಟಿಕ್ಕಿ ನಾವು ರಜ್ಜ ದೂರಲ್ಲಿ ನಮ್ಮ ಕೆಲಸ ಮಾಡಿಗೊಂಡು ಇದ್ದರಾತು. ಅಕಸ್ಮಾತ್ ಅಗತ್ಯ ಇದ್ದರೆ ಅವ್ವೇ ದಿನಿಗೇಳುಗು. ಅದು ಅಲ್ಲದ್ದೆ ಟೀಚರ್ ಹೇಳುವ ಪ್ರತಿಯೊಂದಕ್ಕೂ ಅಮ್ಮನೇ ಮಾತಾಡುದು, ಪ್ರಶ್ನೆಗೆ ಅಮ್ಮನೇ ಉತ್ತರ ಹೇಳುದು, ಮಕ್ಕಳ ಎದುರು ಟೀಚರಿಂಗೆ ಅವಮಾನ ಅಪ್ಪ ರೀತಿಲಿ ಮಾತಾಡುದು ಇತ್ಯಾದಿ ಮಾಡುದು ಯಾವ ರೀತಿಂದಲೂ ಒಳ್ಳೆಯ ಅಭ್ಯಾಸ ಅಲ್ಲ.
- ಮಕ್ಕೊಗೆ ಸಮಯ ಕಳವಲೆ ಹೇಳಿ ಫೋನ್, ಕಂಪ್ಯೂಟರ್ ಅಥವಾ ಟಿವಿ ನೋಡುಲೆ ಬಿಡುದು. ಇದಕ್ಕೆ ಹೊತ್ತಿನ ಮಿತಿ ಇದ್ದರೆ ಸಮಸ್ಯೆ ಇಲ್ಲೆ. ಆದರೆ ಹೆಚ್ಚಿನ ಮನೆಗಳಲ್ಲಿ ದೊಡ್ಡೋರು ತಮ್ಮ ಕೆಲಸಲ್ಲಿ, ಮಕ್ಕೊ ಅವರಷ್ಟಕ್ಕೇ ಬೇಕಾದಷ್ಟು ಹೊತ್ತು ನೋಡುದು ಹೇಳಿ ಆಯ್ದು. ಇದರಿಂದ ಮಕ್ಕಳ ಕಣ್ಣಿನ ಆರೋಗ್ಯ, ಒರಕ್ಕು, ಜೀರ್ಣಕ್ರಿಯೆಯ ಆರೋಗ್ಯವೂ ಹಾಳಾವ್ತು. ಇದಲ್ಲದ್ದೆ ಮಾನಸಿಕ, ಬೌದ್ಧಿಕ ಬೆಳವಣಿಗೆಗೂ ಇದರಿಂದ ತೊಂದರೆ ಇದ್ದು. ಇದು ಕೇವಲ ಸ್ಕ್ರೀನ್ ನೋಡುವ ಕಾರಣಂದ ಅಲ್ಲ. ಬದಲಿಂಗೆ ಮಕ್ಕೊ ಅದರಲ್ಲಿ ನೋಡುವ ವಿಷಯ, ಅದರ ಭಾಷೆ ಇತ್ಯಾದಿಗಳೂ ಮುಖ್ಯವೇ. ಹಾಂಗಾಗಿ ಮಕ್ಕೊ ಎಂತ ನೋಡೆಕು, ಎಷ್ಟು ಹೊತ್ತು ನೋಡೆಕು, ಮತ್ತೆ ನೋಡುವಗ ಪಾಲಿಸೆಕಾದ ಅಂಶಂಗ ಎಂತ ಹೇಳಿ ದೊಡ್ಡೋರು ಸರಿಯಾಗಿ ಗಮನಿಸೆಕ್ಕು.
- ಮಕ್ಕಳ ಆಹಾರದ ಬಗ್ಗೆ ಅಂತೂ ಕಂಟ್ರೋಲೇ ಇರ್ತಿಲ್ಲೆ ಮನೆಲಿದ್ದರೆ. ಗಳಿಗ್ಗೊಂದರಿ ಎಂತಾರು ಬೇಕು ತಿಂಬಲೆ. ಹೊಟ್ಟೆ ತುಂಬ ಊಟ ಮುಗುಶಿ ಕೂದ್ದಷ್ಟೆ ಹೇಳಿಯಪ್ಪಗ ಚಿಪ್ಸ್ ಬೇಕು, ಬಿಸ್ಕುಟು ಬೇಕು, ಚಾಕ್ಲೇಟ್ ಐಸ್ಕ್ರೀಮ್ ಹೇಳಿ ಬೇಡಿಕೆ ಶುರು ಆವ್ತು. ಇದು ತುಂಬ ಸಹಜ. ಮಕ್ಕೊ ಅಂಬಗಂಬಗ ತಿಂದುಗೊಂಡೇ ಇಪ್ಪದು ತಪ್ಪು ಕೂಡ ಅಲ್ಲ. ಆದರೆ ಎಂತ ತಿಂತವು ಹೇಳುದು ಪ್ರಶ್ನೆ. ಮಕ್ಕಳ ಆರೋಗ್ಯಕ್ಕೆ ಒಳ್ಳೆದು ಹೇಳಿ ಜಾಹೀರಾತಿಲ್ಲಿ ತೋರ್ಸುವ, ಪ್ಯಾಕೇಟಿಲ್ಲಿ ಬಪ್ಪ ಯಾವ ಆಹಾರವೂ ಮಕ್ಕಳ ಆರೋಗ್ಯಕ್ಕೆ ಒಳ್ಳೆದಲ್ಲ!
ಹಾಂಗಾಗಿ ಮಕ್ಕೊಗೆ ಮನೆಲಿಯೇ ಮಾಡಿದ ಕಾಟಂಕೋಟಿಯನ್ನೋ, ಹಣ್ಣುಗಳನ್ನೋ, ಒಣದ್ರಾಕ್ಷೆ, ಬೀಜಬೊಂಡು, ಬಾದಾಮಿಯೋ ಇತ್ಯಾದಿಗಳನ್ನೇ ಕೊಡುವ ಅಭ್ಯಾಸ ಮಾಡೆಕ್ಕು.
ಮುಖ್ಯವಾಗಿ ದಿನಕ್ಕೆ ನಾಲ್ಕು ಹೊತ್ತು, ಹೇಳಿರೆ ಉದಿಯಪ್ಪಗಾಣ ತಿಂಡಿ, ಮಧ್ಯಾಹ್ನದ ಊಟ, ಹೊತ್ತೋಪಗಾಣ ತಿಂಡಿ ಮತ್ತೆ ಇರುಳಾಣ ಊಟ. ಇದಿಷ್ಟೂ ಹೊಟ್ಟೆ ತುಂಬ ಪೌಷ್ಟಿಕಾಂಶ ಇಪ್ಪ ಆಹಾರ ಮಕ್ಕೊಗೆ ಸಿಕ್ಕುವ ಹಾಂಗೆ ನೋಡಿಗೊಳ್ಳೆಕು. ಅಂಬಗ ಹೊತ್ತಲ್ಲದ್ದ ಹೊತ್ತಿಲ್ಲಿ ತಿಂಬದು ಸಹಜವಾಗಿಯೇ ಕಮ್ಮಿ ಆವ್ತು. ಅಲ್ಲದ್ದೆ ಆರೋಗ್ಯಕ್ಕೂ ತೊಂದರೆ ಇಲ್ಲೆ. ಹೆರಾಣ ಆಹಾರ ಕೊಡ್ತರೂ ಒಂದು ಮಿತಿಲಿಯೇ ಇರಲಿ. - ಇನ್ನೊಂದು ಮುಖ್ಯ ವಿಷಯ ಒರಕ್ಕಿಂದು. ಸಾಮಾನ್ಯವಾಗಿ ಶಾಲೆಗೆ ಹೋಗಿ, ಹೆರ ಸೊಕ್ಕಿ ಬಂದಪ್ಪಗ ಬಚ್ಚುತ್ತು. ಬೇಡ ಹೇಳಿರೂ ಒರಕ್ಕು ಬತ್ತು ಇರುಳು. ಆದರೆ ಈಗ ಹಾಂಗಿಲ್ಲೆ. ಹಾಂಗಾಗಿ ಮನೆ ಒಳವೇ ಆದರೂ ಮಕ್ಕೊಗೆ ದೈಹಿಕವಾಗಿ ವ್ಯಾಯಾಮ ಸಿಕ್ಕುವ ಆಟಂಗಳ ಆಡ್ಸೆಕು. ಇರುಳು ಬೇಗ ಮನುಗುಲೆ ಇಡೀ ಮನೆಯ ಲೈಟುಗಳ ಆಫ್ ಮಾಡೆಕು. ಅಂಬಗ ಮಕ್ಕೊ ತಾನಾಗಿಯೇ ಸುಮ್ಮನೆ ಮನುಗುತ್ತವು. ನಿಧಾನಕ್ಕೆ ಒರಕ್ಕೂ ಬತ್ತು. ಉದಿಯಪ್ಪಗ ರಜ್ಜ ಬೇಗ ಏಳುವ ಅಭ್ಯಾಸವೂ ಆವ್ತು. ಇನ್ನೂ ಒಂದು ಉಪಾಯ ಹೇಳಿರೆ, ಇರುಳು ಮನುಗುವನ್ನ ರಜ್ಜ ಮೊದಲು ಬೆಚ್ಚಂಗೆ ಇಪ್ಪ ಹಾಲು ಕುಡುದರೆ ಲಾಯ್ಕ ಒರಕ್ಕುಹಿಡಿತ್ತು.
- ಇದೆಲ್ಲಕ್ಕಿಂತ ಮುಖ್ಯ ಸಮಸ್ಯೆ ಹೇಳಿರೆ ಮಕ್ಕಳ ಹಟ. ಇದು ಯಾವಗಲೂ ಇಪ್ಪ ಸಮಸ್ಯೆಯೇ ಆದರೂ ಕೊರೊನಾ ಕಾಲಲ್ಲಿ ಹೆಚ್ಚಾಯ್ದು. ಇದಕ್ಕೆ ಮಕ್ಕಳ ಕ್ರಿಯಾಶೀಲತೆಗೆ ಬೇಕಾದಷ್ಟು ಕೆಲಸ ನಾವು ಕೊಡ್ತಾ ಇಲ್ಲೆ ಹೇಳುದು ಒಂದು ಕಾರಣ. ಇನ್ನೊಂದು ಮುಖ್ಯ ಕಾರಣ ದೊಡ್ಡೋರು ಕೂಡಾ ಒತ್ತಡಲ್ಲಿಯೇ ಇಪ್ಪದು. ದೊಡ್ಡೋರಿಂಗೆ ಸಮಾಧಾನದ ಕೊರತೆ ಆಯ್ದು. ಮಕ್ಕಳ ಹಟಕ್ಕೆ ದೊಡ್ಡೋರ ಪ್ರತಿಕ್ರಿಯೆ ಸಮಾಧಾನವೇ ಆಗಿದ್ದರೆ ಮಾಂತ್ರ ಪರಿಹಾರ ಮಾಡ್ಲೆಡಿಗು. ಎರಡೂ ಕಡೆ ಹಟ ಕೋಪ ಇದ್ದರೆ ಅಲ್ಲಿ ಸಮಸ್ಯೆಗೆ ಉತ್ತರ ಹೇಂಗೆ ಸಿಕ್ಕುಗು? ಇದಕ್ಕೆ ಇಪ್ಪ ಪರಿಹಾರ ಒಂದೇ. ದೊಡ್ಡೋರು ಮೊದಲು ತಮ್ಮ ಮನಸ್ಸಿಂಗೆ ಸಮಾಧಾನ ತಂದುಗೊಳ್ಳೆಕು. ಮಕ್ಕಳ ಮನಸ್ಸಿನ ಸ್ಥಿತಿ ಅರ್ಥ ಮಾಡಿಗೊಂಡು ವ್ಯವಹಾರ ನಡಶೆಕು.
- ಶಾಲೆಗೆ ಮತ್ತೆ ಯಾವುದೇ ಸಾಮಾಜಿಕ ಕಾರ್ಯಕ್ರಮಕ್ಕೆ ಹೋಗದ್ದ ಕಾರಣ ಮಕ್ಕೊಗೆ ತಮ್ಮದೇ ಪ್ರಾಯದ ಮಕ್ಕಳ ಒಟ್ಟಿಂಗೆ ಇರೆಕಾದ ಒಡನಾಟ ಸಿಕ್ಕುತ್ತಿಲ್ಲೆ. ಸಮಾಜದೊಟ್ಟಿಂಗೆ ಬೆರೆವ ಅವಕಾಶ ಇಲ್ಲದ್ದೆ ಮಕ್ಕಳಲ್ಲಿ ಮಾನಸಿಕ ಬೆಳವಣಿಗೆಯ ಸಮಸ್ಯೆ ಅಕ್ಕು. ಹಾಂಗಾಗಿ ಸಾಧ್ಯ ಇದ್ದಷ್ಟು ಬೇರೆ ಮಕ್ಕಳೊಟ್ಟಿಂಗೆ ಆಡುಲೆ ಅವಕಾಶ ಮಾಡಿಕೊಡುಲೆ ಪ್ರಯತ್ನ ಮಾಡೆಕು. ಹತ್ರಾಣ ಸಂಬಂಧಿಕರ, ಸ್ನೇಹಿತರ ಸಾಧ್ಯ ಆದರೆ ಭೇಟಿ ಮಾಡುದು, ಅಥವಾ ವಿಡಿಯೊ ಕಾಲ್ ಮಾಡಿ ಮಾತಾಡುದು ಮಕ್ಕೊಗೆ ಮಾಂತ್ರ ಅಲ್ಲ. ನವಗೂ ಒಳ್ಳೆದೇ ಅಲ್ಲದಾ? ಕೊರೊನಾ ತಡೆವಲೆ ಬೇಕಾದ ಎಲ್ಲ ಮುಂಜಾಗ್ರತೆಗಳ ವಹಿಸಿಗೊಂಡು ನಾವು ಭೇಟಿ ಮಾಡೆಕಾವ್ತು ಹೇಳುದನ್ನೂ ಮರೆವಲಾಗ.
- ಮಕ್ಕೊಗೆ ಉದಾಸೀನ ಆವ್ತು. ಎಂತ ಮಾಡಿರೂ ಹೊತ್ತು ಹೋವ್ತಿಲ್ಲೆ. ಆನ್ಲೈನಿಲ್ಲಿ ಬೇಕಾದಷ್ಟು ಕ್ಲಾಸುಗ ನಡೆತ್ತು ಈಗ. ಕೋಡಿಂಗೂ ಕಲಿಶುತ್ತವು, ಡ್ಯಾನ್ಸು, ಸಂಗೀತ, ಯೋಗ, ಚಿತ್ರ… ಎಂತ ಬೇಕು? ಹೀಂಗೆ ಬೇರೆ ಬೇರೆ ವಿಷಯಲ್ಲಿ ಮಕ್ಕಳ ತೊಡಗುಸುದು ಒಳ್ಳೆದೇ. ಆದರೆ ಶಾಲೆಯ ಪಾಠವೂ ಆನ್ಲೈನೇ ಅಪ್ಪದು, ಒಟ್ಟಿಂಗೆ ಮಕ್ಕೊ ಬೇರೆ ಕಾರ್ಯಕ್ರಮ ನೋಡುಲೆ ಬೇಕಾಗಿಯೂ ಫೋನು, ಟಿವಿ ನೋಡ್ತವು. ಅದರೊಟ್ಟಿಂಗೆ ಮತ್ತೆ ಒಂದೋ ಎರಡೋ ಗಂಟೆಯ ಸ್ಕ್ರೀನ್ ಟೈಮ್ ಹೆಚ್ಚಿಗೆ ಸೇರ್ಸೆಕಾ? ಇದು ಪ್ರಶ್ನೆ.
ಇದಕ್ಕಂಬಗ ಎಂತ ಪರಿಹಾರ? ಮಕ್ಕಳ ಆ ಹೊತ್ತಿನ ಎಂಗೇಜ್ ಮಡುಗುದು ಹೇಂಗೆ?- ಅವಕ್ಕೆ ಆಸಕ್ತಿ ಇಪ್ಪ ಯಾವುದೇ ಪುಸ್ತಕ ಪತ್ರಿಕೆಗಳ ಓದುದು, ಓದ್ಸುದು.
- ಸಂಗೀತ ಕೇಳುದು. ಭಗವದ್ಗೀತೆಯೋ ಇತ್ಯಾದಿಗಳ ಕೇಳ್ಸುದು. ನವಗೆ ಗೊಂತಿಪ್ಪದನ್ನೇ ಕಲುಶುದು.
- ಬರವದು. ಮಕ್ಕೊಗೆ ಬೇರೆ ಬೇರೆ ವಿಷಯಂಗಳ ಬಗ್ಗೆ ಬರವಲೆ ಕೊಡುದು. ಇದು ಅವರ ಮಾನಸಿಕ, ಬೌದ್ಧಿಕ ಬೆಳವಣಿಗೆಗೂ ಒಳ್ಳೆದು. ಸಮಯ ಕಳವಲೂ ಒಂದು ದಾರಿ ಆತು.
- ಚಿತ್ರ ಬಿಡ್ಸುದು. ಅದಕ್ಕೆ ಕಲ್ತೇ ಆಯಕು ಹೇಳಿ ಇಲ್ಲೆ. ಮಕ್ಕೊ ಅವರ ಮನಸ್ಸಿಂಗೆ ಖುಷಿ ಕಂಡದರ ಬಿಡ್ಸುಲಕ್ಕು. ಇದು ಕೂಡ ಬೌದ್ಧಿಕ, ಮಾನಸಿಕ ಬೆಳವಣಿಗೆಗೆ ಅಗತ್ಯವೇ.
- ಮಕ್ಕಳ ಆಸಕ್ತಿಯ ನೋಡಿಗೊಂದು ಕರಕುಶಲ ವಸ್ತುಗಳನ್ನೋ, ವಿಜ್ಞಾನದ ಪ್ರಯೋಗವನ್ನೋ ಮಾಡ್ಸುದು.
- ಮಕ್ಕೊಗೆ ಹೊಸ ಭಾಷೆ ಕಲುಶುದು.
- ಮಕ್ಕೊಗೆ basic life skills, ಹೇಳಿರೆ ಅಡಿಗೆ ಮಾಡುದು, ಕ್ಲೀನಿಂಗ್ ಮಾಡುದು, ಅವರವರ ಕೆಲಸ ಅವ್ವೇ ಮಾಡುಲೆ ಕಲುಶುದು. ದೊಡ್ಡವ್ವು ಕೆಲಸ ಮಾಡುವಗ ಮಕ್ಕಳನ್ನೂ ಅದರಲ್ಲಿ ಸೇರ್ಸಿಗೊಂಬದು.
ಇನ್ನೂ ಹತ್ತುಹಲವು ದಾರಿ ಇದ್ದು ಮಕ್ಕಳ ಉದಾಸೀನ ದೂರ ಮಾಡ್ಲೆ! ಅದರ ಬಿಟ್ಟು ಮತ್ತೆ ಕಂಪ್ಯೂಟರ್ ಪರದೆಯ ಒಳಾಂಗೆ ಅವರ ನೂಕುದು ಸೂಕ್ತ ಅಲ್ಲ.
ಇದು ಮುಖ್ಯವಾಗಿ ಸಣ್ಣ ಮಕ್ಕಳ ಸಮಸ್ಯೆಗಳ ಬಗ್ಗೆ ಮಾತಾಡಿದ್ದು. ಹದಿಹರೆಯಲ್ಲಿಪ್ಪ ಮಕ್ಕಳ ಸಮಸ್ಯೆಗೊ ಇನ್ನೂ ಹೆಚ್ಚು ಸಂಕೀರ್ಣವಾಗಿಕ್ಕು. ಅದರ ಇನ್ನೂ ಹೆಚ್ಚು ಜಾಗ್ರತೆಂದ ಪರಿಹರಿಸೆಕಾದ ಅಗತ್ಯ ಇದ್ದು.
ಅದೂ ಅಲ್ಲದ್ದೆ ಇಲ್ಲಿ ಸಾಮಾನ್ಯ ವಿಷಯಂಗಳ ಬಗ್ಗೆ ಮಾಂತ್ರ ಹೇಳಿದ್ದು. ಬೇರೆ ಬೇರೆ ಮಕ್ಕಳ ಸಮಸ್ಯೆಗಳೂ, ಅದಕ್ಕೆ ಪರಿಹಾರವೂ ಬೇರೆಯೇ ಇರ್ತು. ಹಾಂಗಾಗಿ ದೊಡ್ಡೋರು ಮಕ್ಕಳ ಸಮಸ್ಯೆಗಳನ್ನೂ ಗಮನಿಸಿ, ಅದನ್ನೂ ಮುಖ್ಯ ಹೇಳಿಯೇ ಪರಿಗಣಿಸಿ ಪರಿಹಾರ ಮಾಡೆಕಾದ ಅಗತ್ಯ ಇದ್ದು. ಇಂದು ಸಣ್ಣ ಆಗಿ ನಿರ್ಲಕ್ಷ್ಯ ಮಾಡಿದ ಸಮಸ್ಯೆ ನಾಳೆ ಅವ್ವು ದೊಡ್ಡಾಗಿಯಪ್ಪಗ ಅದೂ ದೊಡ್ಡ ಸಮಸ್ಯೆ ಆಗಿ ಅವರ ಬದುಕಿಂಗೆ ಮುಳ್ಳಪ್ಪಲಾಗನ್ನೆ?
Good Information
Nice Awareness