ಜನ್ಮಾಷ್ಟಮಿ

ಜನ್ಮಾಷ್ಟಮಿ

ಮನೆಯ ತುಂಬಾ ಗೌಜಿ, ಗದ್ದಲ, ಸಡಗರ, ಮಕ್ಕಳ ಆಟಂಗ, ಹೆಮ್ಮಕ್ಕಳ ಮಾತುಗ, ಗೆಂಡುಮಕ್ಕಳ ಏರುಧ್ವನಿ, ಶಂಖ- ಜಾಗಟೆಯ ಶಬ್ದ, ಸಿಹಿತಿಂಡಿ, ಎಣ್ಣೆಲಿ ಹೊರುದ್ದರ ಘಮ ಘಮ, ಹೂಗಳ ಸುವಾಸನೆ ಎಲ್ಲ ಸೇರಿ ಆ ಮನೆಯ ಕಳೆ ಸ್ವರ್ಗಕ್ಕೆ ಸಮ ಆಗಿತ್ತು. ಪ್ರತಿವರ್ಷದ ಹಾಂಗೆ ಈ ವರ್ಷದೆ ಜೋಯಿಸರ ಮನೆಲಿ ಜನ್ಮಾಷ್ಟಮಿಯ ಗೌಜಿ ಜೋರಾಗಿಯೇ ಇದ್ದತ್ತು. ಸುತ್ತ 10 ಎಕರೆ ಅಡಕ್ಕೆ ತೋಟ, ಗೆದ್ದೆಗಳ ಮಾಲೀಕರಾದ ನಾರಾಯಣ ಜೋಯಿಸರ ಮನೆಲಿ ಜನ್ಮಾಷ್ಟಮಿ ಬಂತು ಹೇಳಿರೆ ಅತ್ಯಂತ ಸಂಭ್ರಮ. ಅವರ ನಾಲ್ಕು ಮಗಳಕ್ಕ, ಮೂರು ಮಗಂದ್ರೂ ಸೇರಿ ಅವರ ಮಕ್ಕ, ಪುಳ್ಯಕ್ಕ, ನೆರೆಕೆರೆ 5-6 ಮನೆಯವು ಬಂದು 40- 50 ಜನ ಸೇರಿ ಮಾಡುವ ಹಬ್ಬ ಇದು ಊರಿಲೇ ವಿಶೇಷ.

ಪೂಜಾ ಕಾರ್ಯಕ್ರಮಂಗ ಮುಗುದು ಮಂಗಳಾರತಿಯ ನಂತರ ಊಟಕ್ಕೆ ಎಲೆ ಹಾಕಿದವು. ಅಷ್ಟಪ್ಪಗ ನಾರಾಯಣ ಜೋಯಿಸರ ನಾಲ್ಕನೇ ಮಗಳು ಸವಿತನ ಆರ್ಭಟ ಸುರುವಾತಿದ. ಎಲ್ಲರುದೆ ಮಾತು ನಿಲ್ಸಿ  ಅತ್ಲಾಗಿ ನೋಡ್ಲೆ ಸುರು ಮಾಡಿದವು. ” ಅಯ್ಯೋ ಅಪ್ಪಾ, ಎನ್ನ ಮಗ ಎಲ್ಲಿದೆ ಕಾಣ್ತಾ ಇಲ್ಲೆ , ಉದಿಯಾಂದ ಲಾಗಾಯ್ತ ಹುಡುಕುತ್ತಾ ಇದ್ದೆಯ. ಈ ನಾಲ್ಕು ಮಕ್ಕ, ಕೆಲಸದವು, ಅಕ್ಕನೂ, ಆನು ಈ ಗಲಾಟೆ ಮಧ್ಯೆ ಇಡೀ ಮನೆ, ಹಟ್ಟಿ, ಜಾಲಿಲಿ ಪೂರ ಇವನ ಹುಡುಕಿ ಹುಡುಕಿ ಸಾಕಾತು. ಎನ್ನಂದಾಗಿ ಪೂಜೆಗೆ ಎಂತ ಉಪದ್ರ ಅಪ್ಪಲಾಗ ಹೇಳಿ ಇಷ್ಟು ಹೊತ್ತು ತಳೀಯದ್ದೆ ಕೂದೆ. ಇನ್ನು ಎನ್ನಂದ ಎಡಿಯ. ಅವಂಗೆ ಇನ್ನುದೆ ಆರು ವರ್ಷ, ಎಲ್ಲಿ ಹೋವ್ತಾಳಿ ಬೇಕನ್ನೆ ಅಪ್ಪಾ. ಅವನ ಕಾಣದ್ದೆ ಆನು ಊಟ ಮಾಡ್ತಿಲ್ಲೆ.” ಹೇಳಿ ಕೂಗ್ಯೋಂಡು ಕೂದತ್ತು. ಅಣ್ಣಂದಿರು ಭಾವಂದಿರು ಬಂದು ಏನು ತಾನೂಳಿ ವಿಚಾರ್ಸಿದವು. ಮಾಣಿ  ಉದಿಯಾಂದ ಕಾಣ್ತಾ ಇಲ್ಲೇಳಿ ಖಾತ್ರಿಮಾಡಿ ಹುಡುಕುಲೆ ಸುರು ಮಾಡಿದವು.

” ಅಯ್ಯೋ ಈ ಹೆಮ್ಮಕ್ಕಳ ಮಗ ಎಂಥಾ ಮಿತ್ತುಕುಂಡಿ ಹೇಳಿ ಎನಗೊಂತಿಲ್ಲೆಯ! ನಿನ್ನೆ ಹೊತ್ತೋಪಗ ಎಂತೋ ಪೂಜೆತಯಾರಿಗೆ ಸಹಾಯ ಮಾಡುವಾಳಿ ಬಂದಿತ್ತಿದ್ದೆ. ಈ ಮಾಣಿ ಆನು ನಿಂದಲ್ಯಂಗೇ ಹತ್ರ ಹೊತ್ತಿಕೊಂಡಿತ್ತ ದೀಪಕ್ಕೆ ಎನ್ನ ಸೆರಗನ್ನೇ ಒಡ್ಡಿದ್ದನ್ನೇ!!. ಸರಿಯಾದ ಹೊತ್ತಿಂಗೆ ಅವನಬ್ಬೆ ಬಂದದ್ದಕ್ಕೆ ಎಂತ ಆಯಿದಿಲ್ಲೆ .ಎನಗಂತೂ ಹೆದರಿ ಲೋಕವೇ ಇಲ್ಲೆ ಒಂದರಿ ಗೊಂತಿದ್ದಾ. ಹಾಂಗಿರ್ತ ಮಾಣಿ  ಇಷ್ಟು ಜನ ಇಪ್ಪಗ ಕಾಣೆಯಾದ್ದು ಒಳ್ಳೆದೇ ಆತು. ಇಲ್ಲದ್ದರೆ ಖಂಡಿತ ಎಂತಾರೂ ಅನಾಹುತ ಮಾಡ್ತಿತ್ತಿದ್ದ.” ಹೇಳಿ ಹತ್ರಾಣ ಮನೆಯ ಸೀತಕ್ಕ ಅದರೊಂಟ್ಟಿಂಗೆ ಬಂದೋರತ್ರ ಹೇಳಿಕೊಂಡಿತ್ತು. ಇದರ ಕೇಳಿಸಿಕೊಂಡ ಸವಿತಂಗೆ ಈಗ ಸೀತಕ್ಕನೇ ಅದರ ಮಗನ ಎಂತೋ ಮಾಡಿದ್ದೂಳಿ ಸಂಶಯ. ಮನೆಯವ್ವೆಲ್ಲ ಊಟ ಬಿಟ್ಟು ತೋಟ, ಗದ್ದೆ, ಕೆರೆ, ಬಾವಿ ಹೇಳಿ 2- 3 ಗಂಟೆಯವರೆಗೂ ಮಾಣಿಯ ಹುಡುಕಿದವು. ಎಷ್ಟೇ ದೆನಿಗೇಳಿದರೂ, ಬೊಬ್ಬೆ ಹೊಡದರೂ ಎಲ್ಲೂ ಮಾಣಿಯ ಸುದ್ದಿಯೇ ಇಲ್ಲೆ. ಯಾಕೋ ಸವಿತಂಗೆ ತಾನು ಮಗನ ಕಳಕೊಂಡನಾಳಿ ಹೆದರಿಕೆ ಅಪ್ಪಲೆ ಶುರುವಾಗಿತ್ತು. ಬಂದಿತ್ತ ನೆಂಟರು- ಇಷ್ಟರೂ ಉಂಡಿಕ್ಕಿ ಹೋಗಿಬಿಟ್ಟವು. ಜೋಯಿಸರು ಮಕ್ಕ,  ಪುಳ್ಯಕ್ಕ ಮಾತ್ರ ತಲೆ ಮೇಲೆ ಕೈಹೊತ್ತು ಇನ್ನೆಂತ ಪೊಲೀಸ್ ಕಂಪ್ಲೆಂಟ್ ಕೊಡುವದೇ ಸರಿ ಹೇಳ್ತ ನಿರ್ಧಾರಕ್ಕೆ ಬಂದವು.

ಅಷ್ಟಪ್ಪಗ ಎರಡನೇ ಮಗ ದೂರದೂರಿಲಿಪ್ಪ ಕಾರಣ ಎಲ್ಲರಿಂಗೂ ಧೈರ್ಯ ತುಂಬಿ ಹೊರಡಲೇ ಬೇಕಪ್ಪ ಅನಿವಾರ್ಯತೆಗೆ ಕಟ್ಟುಬಿದ್ದು ಹೊರಟು ನಿಂದ. ಆದರೂ ಜೋಯಿಸರತ್ರ ಹೋಗಿ, “ಅಪ್ಪಾ ಮನೆಲಿಪ್ಪ ಅಕ್ಕಿ ತುಂಬುಸುವ ದೊಡ್ಡ ಪಗಡ ಬೇಕಾತು, ಬಾರೀ ಬೆಲೆಬಾಳುವ ಹಳತ್ತು ಪಾತ್ರೆ ಅದು. ಎನಗುದೆ ವ್ಯವಹಾರದಲ್ಲಿ ಈ ಕರೋನ ಹೇಳಿ ನಷ್ಟ ಆದ ಕಾರಣ ರಜ ಪೈಸೆಯ ಅಗತ್ಯವೂ ಇದ್ದತ್ತು ಹಾಂಗೆ ಅಟ್ಟದ ಮೇಲಿಪ್ಪ ಆ ಪಾತ್ರವ ಆನೇ ಕೊಂಡೋವ್ತೆ.  ಪಾಲು ಪತ್ರಲ್ಲಿಯೂ ಅದರ ಎನ್ನ ಹೆಸರಿಂಗೆ ಬರದು ಬಿಡಿ. ಅಪ್ಪಾ, ಈಗ ನಿಂಗಳ ತಲೆಬೆಶಿ ಎನಗುದೆ ಅರ್ಥ ಆವ್ತು. ಮಾಣಿ ಇಲ್ಲಿಯೇ ಎಲ್ಲೋ ಇಕ್ಕು, ಹೆದರೆಡಿ ಸಿಕ್ಕುತ್ತ. ಆದರೆ ಆನಿಂದು ಹೋದರೆ ಇನ್ಯಾವಾಗ ಬಪ್ಪದೋ ಗೊಂತಿಲ್ಲೆ, ಎನ್ನದು ತಪ್ಪಾತು”. ಹೇಳಿ ಹೇಳಿಕೊಂಡು ಜೋಯಿಸರ ಒಣ ನೋಟಕ್ಕೂ ಸೊಪ್ಪು ಹಾಕದ್ದೆ ಅಟ್ಟಕ್ಕೆ ಹತ್ತಿ ಧೂಳು ಹಿಡುದ ದೊಡ್ಡ ಪಗಡವ ತೆಗದರೆ!!!! ಅಲ್ಲಿ!!!!?? ಅದರೊಳ ಲಾಯ್ಕಲ್ಲಿ ವರಗಿದ್ದ ನಮ್ಮ ಮಾಣಿ ಶ್ಯಾಮ!!!. ಕಣ್ಣುಮುಚ್ಚಾಲೆ ಆಟಲ್ಲಿ ಎಂದಿಂಗೂ ಸೋಲೊಪ್ಪದ  ಅವ ಇಂದು ಮನೆಯೋರ ಎಲ್ಲಾ ಸೋಲಿಸಿಬಿಟ್ಟಿತ್ತ!!!!!.

Krishna

LEAVE A REPLY

Please enter your comment!
Please enter your name here