ಕಥೆ ಹೇಳಮ್ಮಾ ಕಥೆ ಹೇಳು

story telling

ಆರಿಂಗೆ ಕಥೆ ಬೇಡ? ಎಲ್ಲೋರಿಂಗೂ ಬೇಕು ಕಥೆ. ಮಕ್ಕೊಗೆ ಪಂಚತಂತ್ರದ ಕಥೆ, ದೊಡ್ಡವಕ್ಕೆ ಕಾದಂಬರಿಯೋ ಸಿನೆಮಾವೋ ಟಿವಿಲಿ ಬಪ್ಪ ಧಾರಾವಾಹಿಯೋ ಹೀಂಗಿಪ್ಪದರಲ್ಲಿ ಹೆಚ್ಚು ಆಸಕ್ತಿ. ಇನ್ನೂ ಕೆಲವರಿಂಗೆ ಇನ್ನೊಬ್ಬರ ಸಂಸಾರ-ವೈಯಕ್ತಿಕ ಬದುಕಿನ ಕತೆಲಿ ಹೆಚ್ಚಿನ ಆಸಕ್ತಿ. ಈ ಕಥೆಗೊ ನಮ್ಮ ಬದುಕಿಲ್ಲಿ ತುಂಬ ಮುಖ್ಯ ಪಾತ್ರವಹಿಸುತ್ತು ಹೇಳುದು ನಾವು ಗಮನಿಸಿದ್ದಾ? ಮಕ್ಕೊಗೆ ಕಥೆ ಹೇಳುವ, ಓದುಸುವ ಅಗತ್ಯದ ಬಗ್ಗೆ ರಜ್ಜ ಮಾತಾಡುವ ಇಂದು…

ಕಥೆಯ ಇತಿಹಾಸ ನೋಡಿರೆ ಅದು ಜಗತ್ತಿನ ಎಲ್ಲ ಜನಾಂಗಲ್ಲಿಯೂ ಎಲ್ಲ ಕಾಲಘಟ್ಟಲ್ಲಿಯೂ ಇಪ್ಪದು ಕಾಣ್ತು. ಮನುಷ್ಯರು ಇದ್ದಲ್ಲೆಲ್ಲ ಕಥೆಯೂ ಇದ್ದು ಹೇಳಿ ಆತಂಬಗ. ಗುಹೆಗಳಲ್ಲಿ ಬದುಕಿದ ಮನುಷ್ಯರು ಅಲ್ಲಿ ಚಿತ್ರ ಬಿಡುಸಿ ಮಡುಗಿದ್ದು ಕಾಣ್ತು. ಈಜಿಪ್ಟಿನ ಪಿರಮಿಡ್ಡಿನ ಒಳವೂ ಕಥೆಗಳ ಚಿತ್ರ ಬಿಡುಸಿದ್ದು ಕಾಣ್ತು. ಜಗತ್ತಿಲ್ಲಿ, ಮುಖ್ಯವಾಗಿ ಯೂರೋಪು, ಆಫ್ರಿಕಾ, ಅಮೆರಿಕಾ ಭಾಗಂಗಳಲ್ಲಿ ಬರಹ ಶುರು ಅಪ್ಪನ್ನ ಮೊದಲೇ ಕಥೆ ಹೇಳುವ ಕ್ರಮ ಇದ್ದತ್ತು. ಈಸೋಪನ ನೀತಿಕಥೆಗಳು ಹೇಳಿ ನವಗೆ ಗೊಂತಿದ್ದು. ನಮ್ಮ ಪಂಚತಂತ್ರದ ಕಥೆಗಳ ಹಾಂಗೆಯೇ ಇಪ್ಪ ನೀತಿಯ ಕತೆಗೊ ಇದು. ನಮ್ಮ ದೇಶದ ಕಥೆಗಳ ಬಗ್ಗೆ ಹೇಳುವ ಅಗತ್ಯವೇ ಇಲ್ಲೆ. ಆದಿಕಾವ್ಯ ರಾಮಾಯಣಂದ ಶುರುವಾಗಿ ಮಹಾಭಾರತ, ಮಹಾಕಾವ್ಯಂಗೊ, ಬೇರೆ ಬೇರೆ ಭಾಷೆಯ ಕಾವ್ಯಂಗೊ, ಜನಪದ ಕಥೆಗೊ, ಇಂದಿನ ಸಿನೆಮಾ, ಕಥೆ-ಕಾದಂಬರಿ, ಧಾರಾವಾಹಿಗಳ ವರೆಗೆ ಕೋಟಿ ಕೋಟಿ ಕಥೆಗೊ ಇದ್ದು.

ಹಾಂಗಾರೆ ಇಷ್ಟೆಲ್ಲ ಕಥೆಗೊ ಹುಟ್ಟುಲೆ, ಉಳಿವಲೆ ಕಾರಣ ಎಂತ? ಅದರಿಂದ ಮನುಷ್ಯಂಗೆ ಲಾಭ ಇಲ್ಲದ್ದರೆ ಅದರ ಉಳುಶುವ ಬೆಳಶುವ ಕೆಲಸ ಮನುಷ್ಯ ಮಾಡ್ತಿತನೇ ಇಲ್ಲೆ ಅಲ್ಲದ?

 • ಕಥೆ ಕೇಳುದು ನಮ್ಮ ಮನಸ್ಸಿಂಗೆ ಸಮಾಧಾನ ಕೊಡ್ತು.
 • ನಮ್ಮ ಬದುಕಿನ ಸರಿ-ತಪ್ಪುಗಳ ನೋಡಿಗೊಂಡು ತಿದ್ದಿಗೊಂಬಲೆ ಅವಕಾಶ ಕೊಡ್ತು.
 • ಮಾನಸಿಕ ಒತ್ತಡವ ಕಮ್ಮಿ ಮಾಡ್ತು.
 • ಒತ್ತಡ ಇಲ್ಲದ್ರೂ ಕಥೆ ಓದುದು, ನೋಡುದು ಅಥವಾ ಕೇಳುದು ನಮ್ಮ ಮನಸ್ಸಿಂಗೆ ಖುಷಿ ಕೊಡ್ತು. ಖುಷಿಯಾಗಿಪ್ಪದು ಆರಿಂಗೆ ಇಷ್ಟ ಇಲ್ಲೆ?
 • ಭಾಷೆಯ, ಸ್ಂಸ್ಕೃತಿಗಳ ಬಗ್ಗೆ ತಿಳುಕ್ಕೊಂಬಲಾವ್ತು.

ಇಷ್ಟೆಲ್ಲ ಉಪಯೋಗ ದೊಡ್ಡವಕ್ಕೇ ಇದ್ದು ಹೇಳಿಯಪ್ಪಗ, ಮಕ್ಕೊಗೆ ಕಥೆ ಹೇಳುದರಿಂದ ಇದಕ್ಕಿಂತಲೂ ಹೆಚ್ಚಿನ ಪ್ರಯೋಜನ ಇಕ್ಕಲ್ಲದ? ಯಾವುದೇ ವಿಷಯವ ಮಕ್ಕೊಗೆ ಪರಿಣಾಮಕಾರಿಯಾಗಿ ತಿಳ್ಸೆಕಾದರೆ ಕಥೆಯಷ್ಟು ಉತ್ತಮ ಮಾರ್ಗ ಬೇರೆ ಇಲ್ಲೆ.

 • ಮಕ್ಕಳ ಭಾಷಾಜ್ಞಾನ ಹೆಚ್ಚಾವ್ತು – ಹೊಸ ಪದಂಗಳ ಬಳಕೆ, ಹೊಸ ಪ್ರಯೋಗಂಗಳ ಬಳಕೆಯ ಬಗ್ಗೆ ತಿಳಿವಲೆ ಇದು ಸುಲಭ ದಾರಿ. ಯಕ್ಷಗಾನ ತಾಳಮದ್ದಳೆ ಕೇಳುವ ಮಕ್ಕಳ ಕನ್ನಡ ಜ್ಞಾನ ಹೆಚ್ಚು ಬೇಗ ಬೆಳೆತ್ತು ಹೇಳುದರ ನಾವು ಗಮನಿಸೆಕು. ಅದಕ್ಕೆ ಕಾರಣ ಯಕ್ಷಗಾನಲ್ಲಿ ಬಳಸುವ ಶುದ್ಧ ಕನ್ನಡ. ಕಮ್ಯುನಿಕೇಶನ್ ಅಥವಾ ಸವಹನದ ಶಕ್ತಿಯ ಹೆಚ್ಚು ಮಾಡ್ತು.
 • ಹೊಸ ವಿಷಯಂಗಳ, ಮುಖ್ಯವಾಗಿ ಜೀವನಮೌಲ್ಯಂಗಳ ಮಕ್ಕೊಗೆ ಅರ್ಥ ಮಾಡ್ಸುಲೆ ಇದು ಅತ್ಯಂತ ಸುಲಭ ವಿಧಾನ.
  • ಸತ್ಯ ಹೇಳೆಕು ಹೇಳಿ ಅಂತೆ ಹೇಳುದಕ್ಕಿಂತ ಪುಣ್ಯಕೋಟಿಯ ಕಥೆ ಹೇಳಿರೆ ಹೆಚ್ಚು ಪರಿಣಾಮಕಾರಿ.
  • ಸ್ನೇಹದ ಬಗ್ಗೆ ಹೇಳುವಗ ಸುಧಾಮ-ಕೃಷ್ಣ ಕಥೆ ಹೇಳುಲಕ್ಕು. ಅಥವಾ ರಾಮ-ಸುಗ್ರೀವರ ಬಗ್ಗೆಯೂ ಹೇಳುಲಕ್ಕು.
  • ಅಧರ್ಮ ಮಾಡುವವ್ವು ನಮ್ಮವ್ವು ಹೇಳುವ ಕಾರಣಕ್ಕೆ ಅವರ ನಾವು ಸಮರ್ಥನೆ ಮಾಡ್ಲಾಗ. ವಿಭೀಷಣನ ಕಥೆ ಇದರ ಹೆಚ್ಚು ಸಮರ್ಥವಾಗಿ ಅರ್ಥ ಮಾಡ್ಸುತ್ತು.
  • ತನ್ನ ಮಾತಿಂಗೆ ತಪ್ಪುಲಾಗ ಹೇಳುದರ ಭೀಷ್ಮನ ಕಥೆಂದ ಕಲಿವಲಕ್ಕು.
  • ಭಕ್ತಿಯ ಬಗ್ಗೆ ಶಬರಿಯ ಕಥೆ ಇದ್ದು. ಹೀಂಗೆ ಪ್ರತಿಯೊಂದಕ್ಕೂ ನೂರಾರು ಕಥೆಗೊ ಇದ್ದು.
 • ರಾಮಾಯಣ, ಮಹಾಭಾರತ, ಪುರಾಣ, ಇತಿಹಾಸ, ಪಂಚತಂತ್ರ, ಹಿತೋಪದೇಶಂಗಳಲ್ಲಿ ಸಾವಿರಾರು ಕಥೆಗೊ ಇದ್ದು. ಇದು ನಮ್ಮ ಮಕ್ಕೊಗೆ ನಮ್ಮ ಸಂಸ್ಕೃತಿಯ ಬಗ್ಗೆ, ಇತಿಹಾಸದ ಬಗ್ಗೆ ತಿಳುಶುತ್ತು. ಇದಲ್ಲದ್ದೆ ಬೇರೆ ಬೇರೆ ದೇಶದ ಕಥೆಗಳನ್ನೂ ಅವಕ್ಕೆ ಚೂರು ದೊಡ್ಡ ಆದ ಮೇಲೆ ಹೇಳುಲಕ್ಕು. ಇದರಿಂದ ಅವಕ್ಕೆ ಬೇರೆ ಬೇರೆ ಸಂಸ್ಕೃತಿಗಳ ಬಗ್ಗೆಯೂ ತಿಳಿವಲೆ ಆವ್ತು.
 • ಕಥೆ ಹೇಳುದರ ಕೇಳುದರಿಂದ ಮಕ್ಕಳ ಕೇಳುವ ಅಭ್ಯಾಸ ಬೆಳೆತ್ತು. ಕೇಳುವಿಕೆ ಬದುಕಿಂಗೆ ಅಗತ್ಯ. ಕೇಳಿದ್ದರ ಅರ್ಥ ಮಾಡಿಗೊಂಬದೂ ಅಷ್ಟೇ ಮುಖ್ಯ. ತಾಳ್ಮೆಂದ ಕೇಳುವ ಅಭ್ಯಾಸ ದೊಡ್ಡವಕ್ಕೂ ಇರ್ತಿಲ್ಲೆ ಕೆಲವು ಸರ್ತಿ! ಯಾವುದೇ ರೀತಿಯ ಸಂಬಂಧಂಗಳಲ್ಲಿ ಕೇಳುವಿಕೆ ಮುಖ್ಯ ಆವ್ತು. ಇನ್ನೊಬ್ಬರ ಮಾತು ಕೇಳಿ ಅರ್ಥ ಮಾಡಿಗೊಂಬದು ತುಂಬ ಮುಖ್ಯ. ಕಥೆ ಕೇಳುದು ಈ ಸ್ಕಿಲ್ ನ ಹೆಚ್ಚು ಮಾಡ್ತು.
 • ಇತ್ತೀಚೆಗೆ ಮಕ್ಕಳಲ್ಲಿ ಹೆಚ್ಚಾವ್ತಾ ಇಪ್ಪ ಸಮಸ್ಯೆ ಹೇಳಿರೆ ಮಕ್ಕಳಲ್ಲಿ attention span ಅಥವಾ ಒಂದು ವಿಷಯದ ಬಗ್ಗೆ ಗಮನ ಕೊಡೂವ ಅವಧಿ ಕಮ್ಮಿ ಆವ್ತಾ ಇಪ್ಪದು. ಕಥೆ ಕೇಳುವ ಅಭ್ಯಾಸ ಈ ಸಮಸ್ಯೆಗೆ ಪರಿಹಾರ.
 • ಹೊಸ ಹೊಸ ವಿಷಯಂಗಳ ಕಲಿವಲೆ ಇದೊಂದು ಮಾಧ್ಯಮ. ಉದಾಹರಣೆಗೆ ಕಥೆಲಿ ಬಡಗಿಯ ಅಥವಾ ಕುಂಬಾರನ ಬಗ್ಗೆ ಬಂದರೆ ಆ ಕೆಲಸದ ಬಗ್ಗೆ ಹೆಚ್ಚು ತಿಳಿವ ಅವಕಾಶ ಆವ್ತು. ಅಥವಾ ಒಂದು ಕಥೆಲಿ ಕೃಷಿಯ ಬಗ್ಗೆ ವಿವರಣೆ ಇದ್ದರೆ ಆ ವಿಷಯವ ಕಲಿವಲಾವ್ತು.
 • ಕಥೆ ಕೇಳ್ತಾ ಕಥೆಯ ಸಂದರ್ಭ, ಪಾತ್ರಂಗಳ ಕಲ್ಪನೆ ಮಾಡುವ ಅಭ್ಯಾಸ ಬೆಳೆತ್ತು. ಇದು ತುಂಬಾ ಮುಖ್ಯ. ಮಕ್ಕಳ ಮಾನಸಿಕ ಮತ್ತೆ ಬೌದ್ಧಿಕ ಬೆಳವಣಿಗೆಗೆ ಈ ಕಲ್ಪನೆ ಮಾಡುವ ಅಭ್ಯಾಸ ತುಂಬ ಮುಖ್ಯ. ಇದು ಯಾವುದೇ ಹೊಸ ಯೋಚನೆ, ಸಮಸ್ಯೆಗೆ ಪರಿಹಾರ ಕಂಡುಗೊಂಬಲೆ ತುಂಬ ಮುಖ್ಯ. ಕ್ರಿಯೇಟಿವಿಟಿ ಅಥವ ಸೃಜನಾತ್ಮಕತೆ ಹೇಳುದು ಬೆಳೆಯಕಾರೆ ಕಥೆ ಕೇಳುದು ಮುಖ್ಯ.
 • ಮಕ್ಕಳ ಮಾನಸಿಕ ಒತ್ತಡವ ಕಮ್ಮಿ ಮಾಡ್ತು. ಮಕ್ಕೊಗೆಂತರ ಮಾನಸಿಕ ಒತ್ತಡ ಹೇಳಿ ನಿಂಗೊ ಕೇಳುಗು. ಆದರೆ 7%-10% ಮಕ್ಕೊಗೆ ಬೇರೆ ಬೇರೆ ರೀತಿಯ ಮಾನಸಿಕ ಸಮಸ್ಯೆಗೊ ಇರ್ತು. ಇದಕ್ಕೆ ಒಂದು ಪರಿಹಾರ ಕಥೆ ಕೇಳುದು!
 • ಮನೆಲಿ ಅಜ್ಜ-ಅಜ್ಜಿ, ಅಪ್ಪ-ಅಮ್ಮ ಅಥವಾ ಆರೇ ಆಗಲಿ ಕಥೆಗಳ ಹೇಳುದರಿಂದ ಮಕ್ಕೊಗೆ ಅವರೊಟ್ಟಿಂಗೆ ಹೆಚ್ಚು ಸಮಯ ಕಳವಲೆ ಸಿಕ್ಕುತ್ತು. ಇದು ಕೂಡ ಮಕ್ಕಳ ಬೆಳವಣಿಗೆಗೆ ಪೂರಕ. ಆ ವ್ವ್ಯಕ್ತಿಯೊಟ್ಟಿಂಗೆ ಮಕ್ಕೊ ಭಾವನಾತ್ಮಕವಾಗಿ ಹೆಚ್ಚು ಹತ್ತರೆ ಆವ್ತವು.
 • ಮಕ್ಕಳ ಬದುಕಿಂಗೆ ಹಲೌ ರೀತಿಲಿ ಕಥೆಗೊ ಸ್ಫೂರ್ತಿ ತುಂಬುತ್ತು. ಅದರ ಪರಿಣಾಮ ಕೂಡ್ಲೆಯೇ ಗೊಂತಾಯಕು ಹೇಳಿ ಇಲ್ಲೆ. ಆದರೆ ಅದು ಅವರ ಬದುಕಿಲ್ಲಿ ಮುಂದೆ ಯಾವಗಾರೂ ಪ್ರಯೋಜನಕ್ಕೆ ಬಕ್ಕು.

ಹೀಂಗೆ ವಿವರಿಸುತ್ತಾ ಹೋದರೆ ಮಕ್ಕೊಗೆ ಕಥೆ ಹೇಳುದರ ಧನಾತ್ಮಕ ಪರಿಣಾಮ ತುಂಬ ಇದ್ದು. ಮಕ್ಕೊ ಯಾವುದೇ ಕಥೆಯ ವಿಡಿಯೊ, ಮುಖ್ಯವಾಗಿ ಅನಿಮೇಶನ್ ನೋಡುದರಿಂದ ಅವಕ್ಕೆ ಈ ಪ್ರಯೋಜನ ಅಷ್ಟುಆಗ. ಮೊದಲು ಬಂದುಗೊಂಡಿತ್ತ ರಾಮಾಯಣ, ಮಹಾಭಾರತ, ಶ್ರೀಕೃಷ್ಣದ ಹಾಂಗಿಪ್ಪ ಧಾರವಾಹಿಗೊ ಉತ್ತಮ. ಅನಿಮೇಶನ್ ಮಕ್ಕಳ ಮನಸ್ಸಿನ ನಿಧಾನಕ್ಕೆ ಹಾಳು ಮಾಡ್ತು ಹೇಳುವ ಅಂಶವ ನಾವು ಮರವಲಾಗ. ಆದರೆ ಕಥೆ ಹೇಳುದರಿಂದ ಮಕ್ಕೊಗೆ ಹೆಚ್ಚು ಪ್ರಯೋಜನ ಇದ್ದು. ಹಾಂಗಾಗಿ…

ಇನ್ನುಮೇಲೆ ಕಥೆ ಹೇಳಮ್ಮಾ ಕಥೆ ಹೇಳು ಹೇಳಿ ಮಕ್ಕೊ ಕೇಳಿರೆ ಸಣ್ಣದಾದರೂ ಒಂದು ಕಥೆ ಹೇಳಿಯೇ ಬಿಡುವ. ಆಗದಾ?

LEAVE A REPLY

Please enter your comment!
Please enter your name here