ಲಾಕ್’ಡೌನ್ : ಕೆಲವು ವಿಶೇಷ ನೆನಪುಗೋ!!

ನಾವಾತು ನಮ್ಮ ಕೆಲಸ ಆತು ಹೇಳಿಗೊಂಡು ನಮ್ಮಷ್ಟಕ್ಕೆ ಇದ್ದ ನಮ್ಮೆಲ್ಲರ ಜೀವನಕ್ಕೂ‌ ದೊಡ್ಡ ಬದಲಾವಣೆ ತಂದ ಕೊರೋನಾ ರೋಗ‌ ಅಪ್ಪಳಿಸಿ, ಪ್ರಪಂಚವೇ ‘ಲಾಕ್ಡೌನ್’ ಮೊರೆಹೋಗಿ, ಆ ಲಾಕ್’ಡೌನ್ ನ ಬರ್ತ್ ಡೇಯುದೆ ಹತ್ತರೆ ಬಂತು, ನೋಡಿ! ಹಾಂಗಾಗಿ, ಈ ದೀರ್ಘಾವದಿಯ ಲಾಕ್’ಡೌನ್ ಬಗ್ಗೆ ಒಂದು ಸಣ್ಣ ಅವಲೋಕನ..

ಈ ಲಾಕ್’ಡೌನ್ ಲಿ ಎಲ್ಲೋರೂ ಕಾಲಕ್ಕೆ ತಕ್ಕ ಕೋಲ ಹೇಳುವ ಹಾಂಗೆ, ಲಾಗ ಹಾಕಿ, ಕೋಲಂಗಳ ಮಾಡಿಯೇ ಕೆಲವು ಕಾಲ ಕಳದ್ದದು ಹೇಳಿರೆ ತಪ್ಪಾಗ ಕಾಣ್ತು!
ಸುರುಸುರುವಿಂಗೆ, ಮನೆಯವರೆಲ್ಲರೂ ಒಟ್ಟಿಂಗೆ ಸಮಯ ಕಳವಲೆ ಅಪರೂಪಲ್ಲಿ ಸಿಕ್ಕಿದ ಅವಕಾಶ ಇದು ಹೇಳಿ, ಪಟ್ಟಾಂಗ ಹೊಡಕ್ಕೊಂಡು, ನ್ಯೂಸ್ ನೋಡಿಗೊಂಡು, ಒಟ್ಟಿಂಗೆ ಉಂಡು ತಿಂದು ಮಾಡಿಗೊಂಡು ಕಾಲು ಕಳದೆಯ°.

ಮತ್ತೆ ಮತ್ತೆ, ಒಟ್ಟಿಂಗೆ ಲೂಡೋ, ಲಗೋರಿ, ಕತ್ತೆ ಆಟ ಆಡುಲೆ ಶುರುಮಾಡಿದೆಯ. ಎಡೇಲಿ ಲಾಕ್’ಡೌನ್ ಭಯಂಕರ ಗೌಜಿ ಮಾಡಿದ ಎರಡು ಹೊಸ ಸಿನೆಮಾಂಗಳ ನೋಡಿಯೂ ಆತು! ಮತ್ತೆ ಹಳೇ ಸಿನಿಮಾಂಗಳ ಹುಡ್ಕಿ ಹುಡ್ಕಿ ನೋಡಿತ್ತು. ದಿನಚರಿ ಪೂರ ಅಸ್ತವ್ಯಸ್ತ! ಇನ್ನೆಂತ ಮಾಡುದು?

ಎನಗೆ ತುಂಬ ಇಷ್ಟದ ಹವ್ಯಾಸ ಪುಸ್ತಕ ಓದುದು. ಯಾವ ಪುಸ್ತಕ ಓದುದಪ್ಪ? ಸುರುವಿಂಗೆ ಒಂದೆರಡು e-book ಗಳ‌ ಓದಿದೆ.. ‘ಈ-ಪುಸ್ತಕ’ ಇದ್ದನ್ನೇ, ಎಂತಾದರೂ ಕೈಲಿ ಹಿಡಿದು ಓದಿದ ಹಾಂಗೆ ಆವ್ತಿಲ್ಲೆ. ಆದರೂ ನಮಗೆ ಬೇಕಾದ ಪುಸ್ತಕ ಬೇಕಾದಪ್ಪಗ ಸಿಕ್ಕದ್ದಿಪಗ ಇದೇ ಗತಿ!!
ಮತ್ತೆ, ಹೇಂಗುದೆ ಮನೆಲಿ ಅಜ್ಜ, ಅಪ್ಪ, ಎನ್ನ ಪುಸ್ತಕಂಗ ಮತ್ತು ಅಜ್ಜನಮನೆ ಅಜ್ಜನ ಪುಸ್ತಕಂಗಳ collection ನ ತಡಕಾಡಿ ಆಡಿ, ಕೊನೆಗೆ ಅಜ್ಜ,’ ಸಾಹಿತ್ಯ ಶಿರೋಮಣಿ’ ನೀರ್ಪಾಜೆ ಭೀಮ ಭಟ್ ಬರೆದ ಕೃತಿಗಳಲ್ಲೊಂದು “ಉರ್ವಶಿ” ಹೇಳುವ ಪುಸ್ತಕ ಕೈಗೆತ್ತಿಗೊಂಡೆ.

‘ಸಾಹಿತ್ಯ ಶಿರೋಮಣಿ’ ನೀರ್ಪಾಜೆ ಭೀಮ ಭಟ್ ಬರೆದ ಕೃತಿಗಳಲ್ಲೊಂದು “ಉರ್ವಶಿ”

ಸಂಸ್ಕೃತ ಪಂಡಿತರಾಗಿದ್ದ ಅಜ್ಜ, ಮಹಾಕವಿ ಕಾಳಿದಾಸನ ಜಗದ್ವಿಖ್ಯಾತ ಕೃತಿ ‘ಉರ್ವಶಿ’, ಶ್ರೀಹರ್ಷನ ಕೃತಿ ‘ರತ್ನಾವಳಿ’, ಭಾಸ ಮಹಾಕವಿಯ ‘ವಾಸವದತ್ತೆ’ – ಈ ಮೂರೂ ಪ್ರಸಿದ್ಧ ಕೃತಿಗಳ ಅವರದ್ದೇ ಆದ ಶೈಲಿಲಿ ನಿರೂಪಿಸಿದ, 1994 ರಲ್ಲಿ ಪ್ರಕಟವಾದ ಪುಸ್ತಕ ಅದು. ಅಜ್ಜನ ಬರವಣಿಗೆಯ ಓದಿ ತುಂಬಾ ಖುಷಿಯಾತು. ಮುಂದೆ ಇನ್ನೂ ಹಲವಾರು ಪುಸ್ತಕಂಗಳ, ವಿಶೇಷವಾಗಿ ಆಂಗ್ಲ ಕಾದಂಬರಿಗಳ ಓದುಲೆ ಅವಕಾಶ ಸಿಕ್ಕಿತ್ತು. ಯಾವುದೇ ರೀತಿಯ ಪುಸ್ತಕ ಆಗಿರಲಿ, ಎಂತಾರೊಂದು ಸಣ್ಣ ವಿಷಯ ಆದರೂ ಅದರಲ್ಲು ಕಲಿವಲೆ ಇದ್ದೇ ಇರ್ತು ಹೇಳಿ ನಂಬಿದೋಳು ಆನು. ನಮ್ಮ ಹಿರಿಯೋರು, ಪುಸ್ತಕವ ‘ಜ್ಞಾನಭಂಡಾರ’ ಹೇಳುದು ಅದಕ್ಕೇ ಅಲ್ಲದಾ.‌.

ಪುಸ್ತಕ ಅಂತೇ ಕೂದುಗೊಂಡು ಓದುದಾ? ಚೂರು ಹೊತ್ತಿಲಿಯೇ ಕೈ ಒಟ್ಟೀಂಗೆ ತಿಂಬಲೆಂತ ಇದ್ದಪ್ಪಾ ಹೇಳಿ ಪರಡುಲೆ ಸುರು ಮಾಡದ್ದಿರ್ತಿಲ್ಲೆ ಇದಾ… ಹಾಂಗಾಗಿ, ಇನ್ನು ನಮ್ಮ ಸವಾರಿ ಅಡಿಗೆಕೋಣೆಗೆ. ಆರಾರು, “ಲಾಕ್’ಡೌನ್ ಲಿ ಎಂತೆಲ್ಲ ಅಡಿಗೆ ಮಾಡ್ಲೆ ಕಲ್ತೆ ಕೂಸೆ?” ಹೇಳಿ ಕೇಳಿರೆ, “ಹುಳಿಮೇಲಾರ, ಕೊದಿಲು ಬಿಟ್ಟು ಬೇರೆಲ್ಲ ಕಾಟುಕಂಡದು ಮಾಡ್ಲೆ ಕಲ್ತೆ” ಹೇಳೆಕ್ಕಷ್ಟೆ! ಆ ದಾಲ್ಗೋಣ ಕಾಫಿ ಒಂದು ಬಿಟ್ಟು, ಪಾನಿಪುರಿ, ಕೇಕು, ಪಿಜ್ಜಾ, ಅದು ಇದೂ, ಯೂಟ್ಯೂಬು ನೋಡಿ ಎಲ್ಲಾ ಮಾಡಿದ್ದೇ ಮಾಡಿದ್ದು, ತಿಂದದೇ ತಿಂದದು. (ಈಗ ಎಲ್ಲಿಗೆ ಹೊದರೂ ನೀನು ಲಾಕ್’ಡೌನ್ ಲಿ ತೋರ ಆಯ್ದೆಯಾ ಹೇಳಿ ಎಲ್ಲೋರೂ ಕೇಳುದು ತಡೆತ್ತಿಲ್ಲೆ!)

ಇನ್ನು, ತುಂಬ ಮುಖ್ಯವಾಗಿ ಈ ಲಾಕ್’ಡೌನ್ ಲಿ ವಿದ್ಯಾರ್ಥಿಗೊಕ್ಕೇ ಮೀಸಲಾದ ಎರಡು ಹೊಸ ಸಂಘಟನೆಗಳ ಪರಿಚಯ ಆತು.
ಒಂದು, “ಅದೃಶ್ಯ” ~ ಯಾವುದಾದರೊಂದು ರೀತಿಲಿ ಎನ್ನಂದ ಎಡಿಗಾದ ದೇಶಸೇವೆ ಮಾಡೆಕ್ಕು ಹೇಳುವ ತುಡಿತ ಇಪ್ಪ ವಿದ್ಯಾರ್ಥಿಗಳ ಸಂಘಟನೆ!
ಎರಡನೇದು, “ಆಕಾಂಕ್ಷಾ” ~ ವಿದ್ಯಾರ್ಥಿಗಳ ಆಂತರಿಕ, ಕೌಶಲ್ಯಾಭಿವೃದ್ಧಿಗೆ ಸಹಕಾರಿಯಾಗಿಪ್ಪ ಸಂಘಟನೆ!
ಈ ಎರಡೂ ಸಂಘಟನೆಗಳಂದಾಗಿ ಹೊಸ ಸ್ನೇಹ-ಬಾಂಧವ್ಯಂಗೊ ಬೆಳದತ್ತು, ಸಮಯವ ಹೊಸ ವಿಷಯಂಗಳ ಕಲಿವಲೆ ಸದುಪಯೋಗ ಮಾಡುವ ಹಾಂಗಾತು.

ಬರವಲೆ ಹೆರಟರೆ, ಮುಗಿಯದ್ದ ರೀತಿಲಿ ಜೀವನಲ್ಲಿ ತುಂಬ ಬದಲಾವಣೆಗಳ ತಂದ, ಹೊಸ ಆಲೋಚನೆಗಳ ಮೂಡ್ಸಿದ ಘಟ್ಟ ಇದು; ಜೀವನಲ್ಲಿ ಎಂದೂ ಮರೆಯದ್ದ ಪಾಠಂಗಳ ಹೇಳಿಕೊಟ್ಟಿದು. ಜೀವನ, ಅಶನ, ಉದ್ಯೋಗ, ಪರಿಸರದ ಮಹತ್ವವ ಸಾರಿ ಸಾರಿ ಹೇಳಿದ್ದು. ಇದರೆಲ್ಲ ಮನಸ್ಸಿಲಿ ಮಡಿಕ್ಕೊಂಡು, ಬಹುಬೇಗನೆ ರೋಗದ ಅಳಿದುಳಿದ ಅವಶೇಷಂಗ ಬಹುಬೇಗ ನಿರ್ಮೂಲನೆ ಆಗಲಿ ಹೇಳಿ ಪ್ರಾರ್ಥಿಸಿಗೊಂಡು , ಪುನಃ ಪೂರ್ತಿ ಸಹಜತೆಯತ್ತ ಹೆರಡುಲೆ ನಮ್ಮ ತಯಾರಿ..‌..

1 COMMENT

  1. ಸೂಪರ್ ಲಾಕ್ ಡೌನ್ ನ ಲೇಖನ. ಸತ್ವಯುತವಾಗಿ ಅಚ್ಚುಕಟ್ಟಾಗಿ ಮೂಡಿ ಬೈಂದು. ಎಲ್ಲಾ ವಿಷಯಗಳೂ ಒಳಗೊಂಡ ಲೇಖನ. ಖುಷಿ ಆತು.

LEAVE A REPLY

Please enter your comment!
Please enter your name here