ನುಗ್ಗೆ-ಬದನೆ ಸಾಂಬಾರ್ ನ ಗುಟ್ಟು

ನುಗ್ಗೆ-ಬದನೆ ಸಾಂಬಾರ್ ನ ಗುಟ್ಟು

ನುಗ್ಗೆ-ಬದನೆ ಸಾಂಬಾರ್ ಹೇಳಿರೆ ಆತು ಮೊದಲು ನೆಂಪಪ್ಪದೇ ಕೆಡ್ವಾಸ/ಕೆಡ್ಡಾಸ. ಬೇರೆ ದಿನಂಗಳಲ್ಲಿ ಮಾಡುತ್ತಾದರೂ, ಕೆಡ್ವಾಸದ ದಿನ ಅದರ ವಿಶೇಷವಾಗಿ ಮಾಡಿಯೇ ಮಾಡ್ತು . ಎನಗಂತೂ ಭಾರೀ ಇಷ್ಟ. ಭಾರತೀಯ ಪದ್ದತಿ ಪ್ರಕಾರ ಮಕರ ತಿಂಗಳಿನ ಇಪ್ಪತ್ತೇಳನೇ ದಿನಂದ ಸುರುವಾಗಿ ಕುಂಭ ಸಂಕ್ರಮಣದ ದಿನ ಕೆಡ್ವಾಸ ಮುಗಿತ್ತು. ನಾವು ಹವ್ಯಕರಲ್ಲದ್ದೇ… ತುಳುನಾಡಿಲಿ ಇಪ್ಪ ಕಾರಣ ಈ ಆಚರಣೆ ಬಗ್ಗೆ ಹೆಚ್ಚು ಆನು ವಿವರುಸುಲೇ ಹೋವ್ತಿಲ್ಲೇ. ಆದರೂ ಎಂತಾರು ಬರವಗ ರಜ್ಜ ಮಾಹಿತಿ ಹೇಳುದು ಅವಶ್ಯವೂ ಆದ ಕಾರಣ ಹಬ್ಬದ ಆಚರಣೆ ಬಗ್ಗೆ ಹೇಳ್ತೆ. ಗೊಂತಿಪ್ಪೊರು ಬೇಜಾರ ಮಾಡೆಡಿ ಆತ. ಮುಂದೆ ಓದಿಗೊಂಡು ಹೋಪಗ ಗುಟ್ಟು ಎಂತರ ಹೇಳಿ ಗೊಂತಕ್ಕು.

ನವಗೆ ಗೊಂತಿಪ್ಪ ಹಾಂಗೆ ‘ಕೆಡ್ವಾಸ’ ಹೇಳಿರೆ ಭೂಮಿದೇವಿ ಹೆರಗಿದ್ದು(ಮುಟ್ಟು) ಆಗಿ ಮಿಂದು ಬಪ್ಪ ದಿನ. ಆ ಸಮಯಲ್ಲಿ ಮಣ್ಣು ಒಕ್ಕುಲಾಗ ಹೇಳಿ ಮನೆಯ ಹಿರಿಯರು ಹೇಳುಗು. ಹಾಂಗಾಗಿ ಆರುದೇ ಆ ದಿನಂಗಳಲ್ಲಿ ನೆಲ ಒಕ್ಕುತ್ತವಿಲ್ಲೆ. ಕೆಡ್ವಾಸದ ದಿನ ಉದಿಯಪ್ಪಗ ಮನೆಲಿಪ್ಪ ಹೆಂಗಸರು ಎದ್ದು ತುಳಸಿ ಕಟ್ಟೆ ಎದುರೆ ಗೊಂಪಿನ ಎಲೆಲಿ ಬಾಗೇ ಹುಡಿ, ಅರಶಿನ, ಕುಂಕುಮ ಅದರ ಒಟ್ಟಿಂಗೆ ನೆಲಕ್ಕೆ ರಜ್ಜ ತೆಂಗಿನ ಎಣ್ಣೆ ಬಿಟ್ಟು ನಮಸ್ಕಾರ ಮಾಡ್ತವು. ಅದಾದ ಮತ್ತೆ ಉಂಬಲೆ ನುಗ್ಗೆ-ಬದನೆ ಒಟ್ಟು ಹಾಕಿ ಕೊದಿಲು ಮಾಡ್ತವು. ಎನಗದು ಸಣ್ಣಾದಿಪ್ಪಗಂದಲೇ ತುಂಬಾ ಇ‍ಷ್ಟ. ಎನಗೆ ಎಂತದೇ ಹೊಸತು ಕಂಡರೂ ಅಥವಾ ಸಂಶಯ ಬಂದರೆ ಅಂಬಗಳೇ ಅದೆಂತರ..?, ಇದೆಂತರ ಅಜ್ಜಿ…? ಹೇಳಿ ಕೇಳುವ ಬುದ್ದಿ ಜೋರು. ಆನಿನ್ನೂ ಅಂಬಗ ಮೂರನೇ ಕ್ಲಾಸಿಲಿ ಇತ್ತಿದ್ದೆ. ಆನು ಓದಿದ್ದೆಲ್ಲ ಸರ್ಕಾರಿ ಶಾಲೆಲಿ ಆದ ಕಾರಣ ಮಧ್ಯಾಹ್ನ ಫ್ರೀ ಬೆಶಿ ಊಟವೂ ಸಿಕ್ಕಿಗೊಂಡಿತ್ತು. ಊಟ ಹೇಳಿಯಪ್ಪಗ ಸಾಂಬಾರ್ ಒಂದು ಇದ್ದೇ ಇರ್ತನ್ನೆ. ಬದನೆ ಒಟ್ಟು ಹಾಕಿ ಪದಾರ್ಥ ಮಾಡಿದ ದಿನ ಎನ್ನ ಫ್ರೆಂಡ್ಸ್ ಗ ಎಲ್ಲೋರು ಬದನೆ ಭಾಗವ ಇಡ್ಕಿಗೊಂಡು ಇತ್ತಿದ್ದವು. ಆನು ಅದರ ನೋಡಿ ಕೇಳಿದೆ, ಎಂತಕೆ ಇಡ್ಕುದು? ಎಂತ ರುಚಿ ಇಲ್ಯೋ ? ಮೆಚ್ಚುತ್ತಿಲ್ಯೋ ? ಎಂತ ಸಂಗತಿ ಹೇಳಿ ಕೇಳಿಯಪ್ಪಗ ಗೊಂತಾತು ಬದನೆ ‘ನಂಜು’. ನಂಜು ಹೇಳಿರೆ ಅಸೂಯೆ/ ನಮ್ಮ ಭಾಷೆಲಿ ಹೇಳ್ತರೆ ಹುಳ್ಕು ಬುದ್ಧಿ.

ಬದನೆ ನಂಜು… ಹಾಂಗಾಗಿ ಅದರ ತಿಂದರೆ ಹುಳ್ಕು ಬುದ್ಧಿ ಹೆಚ್ಚಾವ್ತು ಹೇಳಿದವು . ಹಾಂಗಾಗಿ ಆನುದೇ ಬದನೆ ನಂಜು ಹೇಳಿ ತಿಳ್ಕೊಂಡು ಬಿಟ್ಟೆ.

ಕೆಡ್ವಾಸದ ಸಮಯ ಬಂತು; ಮನೆಲಿ ಪ್ರತೀ ವರ್ಷದ ಹಾಂಗೆ ನುಗ್ಗೆ-ಬದನೆ ಸಾಂಬಾರ್ ಮಾಡಿತ್ತಿದ್ದವು. ಪ್ರತಿ ನಿತ್ಯ ಮನೆಲಿ ಅಜ್ಜ-ಅಜ್ಜಿಯ ಒಟ್ಟಿಂಗೆ ಕೂದು ಊಟ ಮಾಡಿಯೊಂಡಿದ್ದ ಆನು ಯಾವಗ್ಳಣಾಂಗೆ ಇಂದುದೇ ಊಟಕ್ಕೆ ಕೂದೆ. ನುಗ್ಗೆ-ಬದನೆ ಸಾಂಬಾರ್ ಅಂತುಗೊಂಡು ಊಟಮಾಡಿಯೊಂಡು, ಅಜ್ಜಿ ಹತ್ತರೆ ಎಂತಕೆ ಕೆಡ್ವಾಸದ ದಿನ ನುಗ್ಗೆ ಬದನೆ ಸಾಂಬಾರ್ ಊಟ ಮಾಡೆಕ್ಕು? ಹೇಳಿ ಕೇಳಿದೆ. ಅವಗ ಅಜ್ಜಿ ಹೇಳಿದವು ಕೆಡ್ವಾಸದ ದಿನ ನುಗ್ಗೆ-ಬದನೆ ಸಾಂಬಾರ್ ಮಾಡಿ ತಿನ್ನದ್ದರೆ ನಮ್ಮ ಎಲುಬುಗ ಎಲ್ಲ ಕುಂಬು(ದುರ್ಬಲ) ಆವ್ತಡ; ಹಾಂಗಾಗಿ ಎಲುಬುಗ ಗಟ್ಟಿ ಆಗಲಿ ಹೇಳಿ ನುಗ್ಗೆ-ಬದನೆ ಸಾಂಬಾರ್ ಮಾಡಿ ಉಂಬದು ಹೇಳಿ ಹೇಳಿದವು. ಕೂಡ್ಲೇ ಆನು ಬಟ್ಳಿನ ಕರೇಲಿ ಹೆರ್ಕಿ ಮಡುಗಿದ್ದ ಬದನೆ ಬಾಗವ ಎಲ್ಲ ತಿಂದೆ. ಅಂದಿಂದ ನಂತ್ರ ಆನಂತೂ ನುಗ್ಗೆ-ಬದನೆ ಸಾಂಬಾರಿನ ಊಟಮಾಡದ್ದೆ ಬಿಡ್ತಿಲ್ಲೆಪ್ಪ…

ಇದು ಎನ್ನ ಬಾಲ್ಯದ ಒಂದು ನೆಂಪು ಅಷ್ಟೇ. ಈಗ ನೆಂಪು ಮಾಡಿಯೊಂಡಪ್ಪಗ ನೆಗೆ ಬತ್ತು. ಅದೆಲ್ಲ ಇರಲಿ… ನಿಂಗ ಕೆಡ್ವಾಸದ ದಿನ ನುಗ್ಗೆ-ಬದನೆ ಸಾಂಬಾರ್ ಮಾಡಿ ಊಟ ಮಾಡ್ತೀ ಅಲ್ದಾ…?ಮಾಡದ್ದರೆ ಊಟ ಮಾಡಿ. ಇಲ್ಲದ್ದರೆ ನಿಂಗಳ ಎಲುಬುದೇ ಕುಂಬಕ್ಕು, ಗೊಂತಾತಲ್ದಾ…? ಈ ನುಗ್ಗೆ-ಬದನೆ ಸಾಂಬಾರಿನ ಕೆಡ್ವಾಸದ ದಿನವೇ ಎಂತಕೆ ಮಾಡಿ ಊಟಮಾಡೆಕ್ಕು ಹೇಳುದರ ಹಿಂದಿನ ಬಗ್ಗೆ ಇಪ್ಪ ವೈಜ್ಙಾನಿಕ ಕಾರಣ ಎನಗೆ ಗೊಂತಿಲ್ಲೆ. ಅದರ ಬಗ್ಗೆ ಹೆಚ್ಹು ತಲೆದೇ ಕೆಡುಸಿಯೊಂಡಿದಿಲ್ಲೆ, ಎಂತಕೆ ಹೇಳಿರೆ ಆನು ಕಲಾವಿಭಾಗದ ವಿದ್ಯಾರ್ಥಿನಿ; ಈ ವೈಜ್ಙಾನಿಕ ಹಿನ್ನಲೆ ಎಲ್ಲ ಎನಗೆ ತಲೆಗೆ ಹೋಗ. ಬರೆತ್ತಾ ಹೋದರೆ ಹೀಂಗೆ ಸುಮಾರಿದ್ದು ಎನ್ನಜ್ಜಿ ಹೇಳಿದ ವಿ‍ಷಯಂಗ, ಅದರೆಲ್ಲ ಇನ್ನೊಂದರಿ ಹೇಳ್ತೆ …..ಆಗದಾ?

LEAVE A REPLY

Please enter your comment!
Please enter your name here