ನಾಯಿಗೆ ಎಂತಕೆ ಸೊಂಡಿಲಿಲ್ಲೆ?
ಪುಚ್ಚೆ ಮಿಯಾಂವ್ ಹೇಳುದೆಂತಕೆ? ಬೌ ಬೌ ಹೇಳ್ತಿಲ್ಲೆ ಏಕೆ?
ನಾವೆಂತಕೆ ಅಶನ ಉಣ್ಣೆಕು? ಹುಲ್ಲು ತಿಂದರೆ ಎಂತ ಆವ್ತು?
ಓ ಆ ಮಾವನ ತಲೆಲಿ ಎಂತಕೆ ಕೂದಲಿಲ್ಲೆ?
ನಾಯಿಯ ತಲೆಯ ಮೇಲೆ ice cube ಮಡುಗಿರೆ ಎಂತ ಅಕ್ಕು?
ಒಂದು ಎರುಗಿಂಗೆ ಒಂದು ಗುಲಾಬ್ ಜಾಮೂನ್ ತಿಂಬಲೆ ಎಷ್ಟು ದಿನ ಬೇಕು?g
ಅಕಸ್ಮಾತ್ ಭೂಮಿಗೆ ತಿರುಗಿ ತಿರುಗಿ ಬಚ್ಚಿ ಕೆಳ ಬಿದ್ದರೆ ನಾವೆಲ್ಲ ಅರಚ್ಚಿಹೋಗದಾ? g-
ನಮ್ಮ ಹೊಟ್ಟೆ ಏಕೆ ಮುಂದೆ ಇದ್ದು? ಬೆನ್ನು ಏಕಿಲ್ಲೆ?
ಮೂಗಿಂಗೆ ಕಣ್ಣು, ಕಣ್ಣಿಂಗೆ ಮೂಗು ಹೇಳಿ ಎಂತಕೆ ಹೆಸರಿಲ್ಲೆ?
ಹಣ್ಣಿಂಗೆ ಕಾಯಿ, ಕಾಯಿಗೆ ಹಣ್ಣು ಹೇಳಿ ಎಂತಕೆ ಹೇಳ್ತವಿಲ್ಲೆ?
ದೋಸೆ ಎಂತಕೆ ಉರುಟೇ ಇರೆಕು? ಬೇರೆ ಆಕಾರಲ್ಲಿ ಏಕೆ ಮಾಡ್ಲಾಗ?

ಇನ್ನೊಂದು ಮುಖ್ಯ ಪ್ರಶ್ನೆ…
ಅಮ್ಮ-ಅಪ್ಪನ ಮದುವೆಗೆ ಎನ್ನ ಎಂತಕೆ ಕರಕ್ಕೊಂಡು ಹೋಯ್ದಿಲ್ಲೆ?
ಹೀಂಗಿದ್ದ, ಇನ್ನೂ ಹೆಚ್ಚು ಕುತೂಹಲಕಾರಿಯಾದ ಪ್ರಶ್ನೆಗಳ ನಿಂಗಳ ಮನೆಯ ಪುಟ್ಟುಮಕ್ಕಳೂ ಕೇಳಿಕ್ಕು. ಕೆಲವು ಪ್ರಶ್ನೆ ಕೇಳಿಯಪ್ಪಗಳೇ ನವಗೆ ತಡವಲೆಡಿಯದ್ದ ನೆಗೆ ಬತ್ತು. ಇನ್ನು ಕೆಲವು ಪ್ರಶ್ನೆ ಸಾರ್ವಜನಿಕವಾಗಿ ಕೇಳಿಯಪ್ಪಗ ಮುಜುಗರ ಅಪ್ಪದೂ ಇದ್ದು. ಕೇಳಿದ್ದನ್ನೇ ಮತ್ತೆ ಮತ್ತೆ ಕೇಳಿಯಪ್ಪಗ ಅಥವಾ ಅರ್ಥಹೀನ ಹೇಳಿ ನವಗೆ ಕಾಂಬ ಪ್ರಶ್ನೆಗೊಕ್ಕೆ ಕೋಪವೂ ಬಕ್ಕು. ಇನ್ನು ಕೆಲವು ಪ್ರಶ್ನೆ ಸರಿ ಇದ್ದು ಹೇಳಿ ಕಂಡರೂ ಅದಕ್ಕೆ ಉತ್ತರ ಹೇಳುದು ಹೇಂಗೆ ಹೇಳಿ ಗೊಂತಾಗದ್ದೆ ಸೋಲುದೂ ಇದ್ದು. ಇದೆಲ್ಲವೂ ನವಗೆ ತುಂಬ ಸಾಮಾನ್ಯ ವಿಷಯ ಹೇಳಿ ಕಾಣ್ತು. ಆದರೆ ಈ ಪ್ರಶ್ನೆ ಕೇಳುವ ಅಭ್ಯಾಸ, ಅದಕ್ಕೆ ನಾವು ಉತ್ತರ ಹೇಳುವ, ಹೇಳದ್ದೆ ಇಪ್ಪ ಅಥವಾ ಜೋರು ಮಾಡುವ ಪ್ರಕ್ರಿಯೆಯ ಪರಿಣಾಮ ಮಕ್ಕಳ ಮಾನಸಿಕ, ಬೌದ್ಧಿಕ ಬೆಳವಣಿಗೆಯ ಮೇಲೆ ಇದ್ದು ಹೇಳುದರ ನಾವು ಅರ್ಥ ಮಾಡಿಗೊಳ್ಳೆಕು.

ಮಕ್ಕೊ ಪ್ರಶ್ನೆ ಕೇಳುದು ಸಹಜ. ಅವಕ್ಕೆ ಎಲ್ಲವೂ ಹೊಸತ್ತು. ತಿಳುಕ್ಕೊಂಬ ಕುತೂಹಲ ಮನುಷ್ಯಂಗೆ ಸಹಜವೇ ಅಲ್ಲದ? ಹಾಂಗಾರೆ ಮಕ್ಕೊ ಪ್ರಶ್ನೆ ಕೇಳುದು ಸರಿ ಹೇಳಿ ಆತು. ಈ ಪ್ರಶ್ನೆಗೊಕ್ಕೆ ನಾವು ಹೇಳುವ ಉತ್ತರ ಮತ್ತೆ ಉತ್ತರ ಹೇಳುವ ರೀತಿ ಹೇಂಗಿರೆಕು ಹೇಳುದರ ಬಗ್ಗೆ ರಜ್ಜ ಆಲೋಚನೆ ಮಾಡುವ…
೧) ಮಕ್ಕಳ ಪ್ರಶ್ನೆಗಳ ಬಗ್ಗೆ ನವಗೆ ಗಮನ ಇರೆಕು.
ಅವ್ವು ಯಾವ ವಿಷಯದ ಬಗ್ಗೆ ಪ್ರಶ್ನೆ ಕೇಳ್ತವು ಹೇಳುದು ಅವ್ವು ಯಾವ ವಿಷಯದ ಬಗ್ಗೆ ಆಸಕ್ತಿ, ಕುತೂಹಲ ಹೊಂದಿದ್ದವು ಹೇಳುದರ ಹೇಳ್ತು.
ಅದೂ ಅಲ್ಲದ್ದೆ ಮಕ್ಕೊ ನಮ್ಮ ಅನುಪಸ್ಥಿತಿಲಿ (ಶಾಲೆಲಿ, ಸ್ನೇಹಿತರ ಮೂಲಕ, ಟಿವಿ/ಅಂತರ್ಜಾಲಲ್ಲಿ) ಯಾವ ವಿಷಯಂಗೊಕ್ಕೆ expose ಆಗಿರ್ತವು ಹೇಳುದೂ ಇದರಿಂದ ಗೊಂತಾವ್ತು. ತಪ್ಪು ವಿಷಯ ಆದರೆ ಮಕ್ಕೊ ಅದರಿಂದ ದೂರ ಅಪ್ಪ ಹಾಂಗೆ ಮಾಡುಲೆ ಅವಕಾಶ ಇರ್ತು.
೨) ಕೇಳಿದ ಪ್ರಶ್ನೆಗೆ ಉತ್ತರ ಗೊಂತಿದ್ದರೆ, ಉತ್ತರ ಒಂದೆರಡು ಮಾತಿಲ್ಲಿ ಹೇಳಿ ಮುಗಿವದಾದರೆ ಕೂಡ್ಲೆ ಹೇಳಿ ಮುಗುಶುದು ಒಳ್ಳೆದು. ವಿವರಣೆಯ ಅಗತ್ಯ ಇದ್ದು ಹೇಳಿ ಕಂಡರೆ, ನಿಧಾನಕ್ಕೆ ಪುರ್ಸೊತ್ತಿಲ್ಲಿ ಉದಾಹರಣೆ ಕೊಟ್ಟು ವಿವರ್ಸಿ ಹೇಳೆಕು.
ಆ ಪ್ರಶ್ನೆಗೆ ಉತ್ತರ ಅರ್ಥ ಅಪ್ಪಲೆ ಮಕ್ಕೊ ಇನ್ನೊಂಚೂರು ದೊಡ್ಡ ಆಯಕು ಹೇಳಿ ಕಂಡರೆ ಅವಕ್ಕೆ ಅದರ ಅರ್ಥ ಮಾಡ್ಸೆಕು. ಅಥವಾ ಅದೇ ವಿಷಯವ ಸಣ್ಣ ಮಕ್ಕೊಗೆ ಅರ್ಥ ಅಪ್ಪಹಾಂಗೆ ಸರಳವಾಗಿ, ಅವಕ್ಕೆ ಅರ್ಥ ಅಪ್ಪ ಉದಾಹರಣೆ ಕೊಟ್ಟು ಉತ್ತರ ಹೇಳೆಕು.
೩) ಸಾರ್ವಜನಿಕವಾಗಿ ಮುಜುಗರ ಅಪ್ಪ ಪ್ರಶ್ನೆ ಕೇಳಿರೆ, ಎಲ್ಲರೆದುರು ಬೈವದು, ಪೆಟ್ಟು ಕೊಡುದು ಇತ್ಯಾದಿ ಶಿಕ್ಷೆ ಕೊಟ್ಟರೆ ಅದರಿಂದ ಮಕ್ಕೊಗೆ ಪ್ರಶ್ನೆ ಕೇಳುದೇ ತಪ್ಪಾ ಹೇಳಿ ಅನಿಸುವ ಸಾಧ್ಯತೆ ಇರ್ತು. ನಾವು ಇಲ್ಲಿ ಮೊದಲು ಅರ್ಥ ಮಾಡಿಗೊಳ್ಳೆಕ್ಕಾದ್ದು – ಮಕ್ಕೊ ಹಾಂಗಿದ್ದ ಪ್ರಶ್ನೆ ಕೇಳ್ತವು ಹೇಳಿ ಎಲ್ಲರಿಂಗೂ ಗೊಂತಿರ್ತು. ಹಾಂಗಾಗಿ ಜನಂಗೊ ತಪ್ಪು ತಿಳಿತ್ತವಿಲ್ಲೆ. ನವಗೆ ಮುಜುಗರ ಖಂಡಿತಾ ಆವ್ತು. ಇಲ್ಲೆ ಹೇಳಿ ಅಲ್ಲ. ಆದರೆ ಮಕ್ಕಳ ನಮ್ಮ ನಡುವೆ understanding ಹೇಂಗಿರೆಕು ಹೇಳಿರೆ ಆ ಕ್ಷಣ ಮಕ್ಕೊಗೆ ನಾವು ಮತ್ತೆ ಉತ್ತರ ಹೇಳ್ತು ಹೇಳುದರ ಅರ್ಥ ಮಾಡ್ಸೆಕು. ಅಥವಾ ಅವರ ಗಮನವ ಬೇರೆ ವಿಷಯಕ್ಕೆ ಹೋಪ ಹಾಂಗೆ ಮಾಡೆಕು.
ಮತ್ತೆ ಮನೆಲಿ ನಾವು ಮಾಂತ್ರ ಇಪ್ಪಗ ಆ ಪ್ರಶ್ನೆಗೆ ಉತ್ತರ ಹೇಳೆಕು.
ಹಾಂಗಿದ್ದ ಮುಜುಗರ ಉಂಟಪ್ಪ ಪ್ರಶ್ನೆಗಳ ಸಾರ್ವಜನಿಕವಾಗಿ ಕೇಳುಲಾಗ ಹೇಳುದರ ಅರ್ಥ ಮಾಡ್ಸೆಕು. ಯಾವೆಲ್ಲ ವಿಷಯಂಗಳ ಮನೆಲಿ ಅಮ್ಮ-ಅಪ್ಪನ ಹತ್ತರೆ ಮಾಂತ್ರ ಮಾತಾಡೆಕು, ಯಾವುದರ ಸಾರ್ವಜನಿಕವಾಗಿ ಮಾತಾಡ್ಲಕ್ಕು ಆಗ ಹೇಳುದರ ವಿವರ್ಸೆಕು. ಕಾರಣ ಹೇಳದ್ದೆ, ಬೈವದು ಅಥವಾ ಪೆಟ್ಟು ಕೊಡುದರಿಂದ ಸಮಸ್ಯೆ ಹೆಚ್ಚಾವ್ತು.
೪) ಎಲ್ಲ ಪ್ರಶ್ನೆಗೂ ನವಗೆ ಉತ್ತರ ಗೊಂತಿರೆಕು ಹೇಳಿಯೇ ಇಲ್ಲೆ. ಅದರ ನಾವು ಮಕ್ಕಳ ಎದುರು ಒಪ್ಪಿಗೊಳ್ಳೆಕಾವ್ತು. ಗೊಂತಿಲ್ಲೆ ಹೇಳುಲೆ ಅವಮಾನ ಆವ್ತು ಹೇಳುವ ಕಾರಣಕ್ಕೆ ತುಂಬ ಜನ ದೊಡ್ಡವ್ವು ಮಕ್ಕಳ ಜೋರು ಮಾಡ್ತವು ಅಥವಾ ಲೊಟ್ಟೆ ಉತ್ತರ ಕೊಟ್ಟು ಒಂದರಿಯಂಗೆ ಸಮಾಧಾನ ಮಾಡ್ತವು. ಅದರಿಂದ ಸಮಸ್ಯೆ ಏನೂ ಇಲ್ಲೆ ಹೇಳಿ ನಮ್ಮ ಅಭಿಪ್ರಾಯ. ಆದರೆ ನಿರಂತರ ಹೀಂಗೇ ನಡದರೆ ಮಕ್ಕೊಗೆ ನಿಧಾನಕ್ಕೆ ನಮ್ಮ ಮೇಲೆ ನಂಬಿಕೆ ಹೋವ್ತು ಹೇಳುದು ಲೊಟ್ಟೆ ಹೇಳದ್ದೆ ಇಪ್ಪಲೆ ಮುಖ್ಯ ಕಾರಣ ಅಲ್ಲದ?
ನವಗೆ ಉತ್ತರ ಗೊಂತಿಲ್ಲದ್ದರೆ ತಿಳುದು ಹೇಳ್ತೆ, ಅಥವಾ ಮತ್ತೆ ಹೇಳ್ತೆ ಹೇಳುಲಕ್ಕು. ಮತ್ತೆ ಯಾವಾಗಾದರೂ ಸಮಯ ಸಿಕ್ಕಿಯಪ್ಪಗ ಆ ವಿಷಯವ ತಿಳ್ಕೊಂಡು ಅವಕ್ಕೆ ಅದರ ಹೇಳುದು ಒಳ್ಳೆದು.
೫) ಕೆಲವು ಸರ್ತಿ ಮಕ್ಕೊ ಪ್ರಶ್ನೆ ಕೇಳಿದ ಕೂಡ್ಲೆ ನವಗೆ ನೆಗೆ ಬತ್ತು. ನವಗದು ತುಂಬಾ ಹಾಸ್ಯ ಅನಿಸುಗು. ಆದರೆ ಮಕ್ಕೊಗೆ ಅದು ಮುಖ್ಯ ಆಗಿರ್ತು. ನೆಗೆ ಮಾಡ್ಲಕ್ಕು. ಆದರೆ ಮಕ್ಕೊಗೆ ಅವರ ನಾವು ಅವಮಾನ ಮಾಡಿತ್ತು ಹೇಳಿ ಅನಿಸುವಷ್ಟಲ್ಲ. ಪ್ರತಿ ಪ್ರಶ್ನೆಗೂ ಹೀಂಗೆ ನೆಗೆ ಮಾಡುವ, ಅವರ ಬುದ್ಧಿಯ ಮಟ್ಟವ ಪ್ರಶ್ನೆ ಮಾಡುವ ಪ್ರತಿಕ್ರಿಯೆ ಕೆಲವು ದೊಡ್ಡವ್ವು ಕೊಡ್ತವು. ಇದರಿಂದ ಮಕ್ಕಳ ಆತ್ಮವಿಶ್ವಾಸ ಕುಗ್ಗುತ್ತು. ಪ್ರಶ್ನೆ ಕೇಳುವ, ಕುತೂಹಲ ಆಸಕ್ತಿಲಿ ವಿಷಯ ತಿಳಿವ ಮನೋಭಾವ ನಿಧಾನಕ್ಕೆ ಕಮ್ಮಿ ಆವ್ತಾ ಹೋವ್ತು.
೬) ಎಲ್ಲ ಸರ್ತಿ ಉತ್ತರವ ನಾವೇ ಹೇಳೆಕಾಗಿ ಇರ್ತಿಲ್ಲೆ. ಅವಕ್ಕೆ ಗೊಂತಿಪ್ಪ ವಿಷಯವೇ ಆಗಿದ್ದರೆ ಅವರ ಪ್ರಶ್ನೆಯ ಅವಕ್ಕೇ ಕೇಳಿ ಉತ್ತರ ಕಂಡುಹಿಡಿವಲೆ ಪ್ರೇರೇಪಿಸುದೂ ಅವರ ಬುದ್ಧಿಶಕ್ತಿಗೆ ಕೊಡುವ ಕೆಲಸ. ಮತ್ತೆ ಇದು ಅವರ ಬೆಳವಣಿಗೆಗೆ ಮುಖ್ಯ ಕೂಡ.
ಪ್ರಶ್ನೆ ಕೇಳುದು ಮನುಷ್ಯನ ಸಹಜ ಗುಣ. ಅದು ಯಾವಗ ಇಲ್ಲದ್ದಾವ್ತೋ ಆವಗ ಮನುಷ್ಯನ ಬೆಳವಣಿಗೆ ನಿಲ್ಲುತ್ತು. ದೊಡ್ಡವಕ್ಕೆ ಎಷ್ಟು ಪ್ರಶ್ನೆಗೊ ಹುಟ್ಟುತ್ತು? ಎಷ್ಟಕ್ಕೆ ನಾವು ಉತ್ತರ ಕಂಡುಗೊಳ್ತು? ಎಷ್ಟು ಪ್ರಶ್ನೆಗಳ ನಿರ್ಲಕ್ಷ್ಯ ಮಾಡು go with the flow ಹೇಳಿ ಬದುಕ್ಕುತ್ತು? ಅಥವಾ ಎಲ್ಲ ಪ್ರಶ್ನೆಗೊಕ್ಕೂ ನವಗೆ ಉತ್ತರ ಗೊಂತಿದ್ದು ಹೇಳುವ ಭ್ರಮೆಯಾ?
ಪ್ರಶ್ನೆ ಹುಟ್ಟುದು ಯಾವ ಪ್ರಾಯಲ್ಲಿಯೂ ತಪ್ಪಲ್ಲ. ಉತ್ತರ ಕಂಡುಕೊಳ್ಳದ್ದೆ ಇಪ್ಪದು ತಪ್ಪು.